SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣಕ್ಕೆ ನಾನು ಸಿದ್ಧ

ಧರ್ಮಸ್ಥಳದಲ್ಲಿ ಆಣೆ-ಪ್ರಮಾಣಕ್ಕೆ ನಾನು ಸಿದ್ಧ

0
69

ದಾವಣಗೆರೆ: ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸಿ ಆಣೆ-ಪ್ರಮಾಣ ಮಾಡುವ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷರ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಆಣೆ ಮಾಡಿ ಸುಳ್ಳು ಹೇಳುವ ಧೈರ್ಯ ಯಾರಿಗೂ ಇರುವುದಿಲ್ಲ. ಅದರಲ್ಲೂ ಬಿಜೆಪಿ ಶಾಸಕರು ಆಣೆ ಮಾಡಿ ಸುಳ್ಳು ಹೇಳುವುದಿಲ್ಲ ಎಂಬ ನೂರಕ್ಕೆ ನೂರರಷ್ಟು ವಿಶ್ವಾಸವಿದೆ ಎಂದು ತಿಳಿಸಿದರು.

ಧರ್ಮಸ್ಥಳಕ್ಕೆ ತೆರಳಿ ಆಣೆ-ಪ್ರಮಾಣ ಮಾಡಲು ಯಾರು ಸಿದ್ಧರಾಗಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ನಾನು ಅದಕ್ಕೆ ಸಂಪೂರ್ಣ ಸಿದ್ಧನಿದ್ದೇನೆ ಎಂದು ಶಾಸಕ ಹರೀಶ್ ಸ್ಪಷ್ಟಪಡಿಸಿದರು.

ಅಡ್ಡಮತದಾನ ಮಾಡಿದವರು ಯಾರು ಎಂಬುದರ ಕುರಿತು ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ಸತ್ಯಾಂಶ ಬಹಿರಂಗವಾಗಲಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು. ಆದರೆ ಯಾವುದೇ ಕಾರಣಕ್ಕೂ ನಿರಪರಾಧಿಗಳಿಗೆ ಶಿಕ್ಷೆಯಾಗಬಾರದು ಎಂದು ಹೇಳಿದರು.

ಯಾವುದೇ ಶಾಸಕರು ಮೌನವಾಗಿದ್ದಾರೆ ಎಂಬ ಕಾರಣಕ್ಕೆ ಅವರ ಮೇಲೆಯೇ ಅಡ್ಡಮತದಾನದ ಆರೋಪ ಹೊರಿಸುವುದು ಸರಿಯಲ್ಲ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮಾತ್ರ ಕ್ರಮ ಕೈಗೊಳ್ಳಬೇಕು ಎಂದರು.

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಹಿಂದೆ ಭಿನ್ನಮತ ವ್ಯಕ್ತಪಡಿಸಿದ್ದನ್ನು ಒಪ್ಪಿಕೊಂಡ ಅವರು, ಕಳೆದ ಆರು ತಿಂಗಳಿಂದ ಯಾವುದೇ ಭಿನ್ನಮತೀಯ ಚಟುವಟಿಕೆಗಳು ನಡೆದಿಲ್ಲ. ಪಕ್ಷದ ವರಿಷ್ಠರ ನಿರ್ದೇಶನಕ್ಕಾಗಿ ಕಾಯುತ್ತಿದ್ದು, ಪಕ್ಷದ ಬೆಳವಣಿಗೆಗಾಗಿ ಎಲ್ಲರೂ ಸತ್ಯನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ ಹಾಗೂ ತಾವು ಕೂಡ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದೇವೆ ಎಂದು ಹೇಳಿದ ಹರೀಶ್, ಯತ್ನಾಳ್ ಅವರನ್ನು ಪಕ್ಷದ ಪರವಾಗಿ ಮತದಾನ ಮಾಡಲು ಮನವೊಲಿಸಿದ್ದೇವೆ ಎಂದರು.

ಅಡ್ಡಮತದಾನ ಮಾಡಿದವರು ಯಾರೇ ಆಗಿರಲಿ ಅವರಿಗೆ ಶೀಘ್ರದಲ್ಲೇ ಶಿಕ್ಷೆಯಾಗಬೇಕು. ಪಕ್ಷವನ್ನು ಕಟ್ಟಲು ಶ್ರಮಿಸಿದ ಲಿಂಗರಾಜ್ ಪಾಟೀಲ್ ಮತ್ತು ರಘು ಕೌಟಿಲ್ಯ ಅವರಿಗೆ ಅನ್ಯಾಯವಾಗಬಾರದು ಎಂದು ಹೇಳಿದರು.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಹರೀಶ್, ಕಷ್ಟದ ಸಂದರ್ಭದಲ್ಲಿ ಕುತ್ತಿಗೆ ಹಿಸುಕಬೇಡಿ ಎಂಬ ಅವರ ಅಭಿಪ್ರಾಯ ಸಮಂಜಸವಾಗಿದೆ ಎಂದು ತಿಳಿಸಿದರು.