SK Home Ad
Home ಸಿನಿ ಮಿಲ್ಸ್ ಜೈಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಗಿದ್ದಾರೆ? ವೈರಲ್ ಫೋಟೋ ಹಿಂದಿನ ಅಸಲಿ ಸತ್ಯ ಇಲ್ಲಿದೆ..

ಜೈಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಗಿದ್ದಾರೆ? ವೈರಲ್ ಫೋಟೋ ಹಿಂದಿನ ಅಸಲಿ ಸತ್ಯ ಇಲ್ಲಿದೆ..

0
24

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಮತ್ತು ತಂಡ, ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಜೈಲಿನ ಆವರಣದಲ್ಲಿ ಯೋಗಾಭ್ಯಾಸ ನಡೆಸಿದೆ. ಜೈಲು ಅಧಿಕಾರಿಗಳು ಹಮ್ಮಿಕೊಂಡಿದ್ದ ವಿಶೇಷ ಯೋಗ ಶಿಬಿರದಲ್ಲಿ ದರ್ಶನ್ ಪಾಲ್ಗೊಂಡಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಆರಂಭದಲ್ಲಿ ಈ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲು ನಟ ದರ್ಶನ್ ನಿರಾಕರಿಸಿದ್ದರಂತೆ. ಆದ್ರೆ ಜೈಲಿನ ಹಿರಿಯ ಅಧಿಕಾರಿಗಳು ಮತ್ತು ಡಿಜಿ ಅಲೋಕ್ ಕುಮಾರ್‌, ದರ್ಶನ್ ಅವರನ್ನ ಕಚೇರಿಗೆ ಕರೆಸಿ ಕೌನ್ಸಿಲಿಂಗ್ ನಡೆಸಿದ್ದರು. “ಬೆನ್ನು ನೋವಿನ ಸಮಸ್ಯೆ ಇದ್ದರೆ ಯೋಗ ಮಾಡುವುದರಿಂದ ಉಪಶಮನ ಸಿಗುತ್ತದೆ, ಇದು ಆರೋಗ್ಯಕ್ಕೆ ಉತ್ತಮ” ಎಂದು ಅಧಿಕಾರಿಗಳು ನೀಡಿದ ಧನಾತ್ಮಕ ಸಲಹೆಯ ಮೇರೆಗೆ ದರ್ಶನ್ ಹಾಗೂ ಗ್ಯಾಂಗ್ ಸಹ ಯೋಗ ಮಾಡಲು ಒಪ್ಪಿಕೊಂಡಿತು.

ಅಧಿಕಾರಿಗಳ ಮನವೊಲಿಕೆಯ ನಂತರ, ಜೈಲಿನ ಕಾರಿಡಾರ್‌ನಲ್ಲಿ ನಡೆದ ಸಾಮೂಹಿಕ ಯೋಗಾಭ್ಯಾಸದಲ್ಲಿ ದರ್ಶನ್ ಸುಮಾರು ಒಂದು ಗಂಟೆಗಳ ಕಾಲ ಕಡ್ಡಾಯವಾಗಿ ಪಾಲ್ಗೊಂಡಿದ್ದರು. ಕಪ್ಪು ಬಣ್ಣದ ಶಾರ್ಟ್ಸ್, ಟೀ-ಶರ್ಟ್ ಹಾಗೂ ನೀಲಿ ಬಣ್ಣದ ಜರ್ಕಿನ್ ಧರಿಸಿ ದರ್ಶನ್ ಯೋಗ ಮಾಡುತ್ತಿರುವ ದೃಶ್ಯ ಫೋಟೋದಲ್ಲಿ ಕಂಡುಬಂದಿದೆ. ಇವರೊಂದಿಗೆ ಪ್ರಕರಣದ ಇತರೆ ಆರೋಪಿಗಳು ಹಾಗೂ ಜೈಲಿನ ನೂರಾರು ಕೈದಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಇದೇ ವೇಳೆ ಮಹಿಳಾ ಕೈದಿಗಳ ವಿಭಾಗದಲ್ಲಿ ನಡೆದ ಯೋಗ ಶಿಬಿರದಲ್ಲಿ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಕೂಡ ಪಾಲ್ಗೊಂಡಿದ್ದರು.

ಇತ್ತೀಚೆಗಷ್ಟೇ ದರ್ಶನ್ ಹಳೆಯ ಸಿನಿಮಾ ‘ಕಲಾಸಿಪಾಳ್ಯ’ ಮರುಬಿಡುಗಡೆಯಾದಾಗ, ಜೈಲಿನಲ್ಲಿದ್ದ ಸ್ಥಿತಿಯ ಬಗ್ಗೆ ಅಭಿಮಾನಿಗಳಲ್ಲಿ ಆತಂಕವಿತ್ತು. ಅಲ್ಲದೆ ಈ ಮುನ್ನ ವೈರಲ್ ಆಗಿದ್ದ ಫೋಟೋಗಳನ್ನು ‘ಎಡಿಟೆಡ್’ ಎಂದು ಅಭಿಮಾನಿಗಳು ತಳ್ಳಿಹಾಕಿದ್ದರು. ಆದ್ರೆ ಪ್ರಸ್ತುತ ಬಿಡುಗಡೆಯಾಗಿರುವ ಈ ಅಸಲಿ ಫೋಟೋವನ್ನು ನೋಡಿರುವ ಅಭಿಮಾನಿಗಳು, ತಮ್ಮ ನೆಚ್ಚಿನ ನಟನ ಆರೋಗ್ಯ ಸುಸ್ಥಿತಿಯಲ್ಲಿದೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.