ದಾವಣಗೆರೆ: ಭದ್ರಾ ಜಲಾಶಯದಿಂದ ನೀರು ಹರಿಹರ ಭಾಗಕ್ಕೆ ತಲುಪದಿರುವ ಕುರಿತು ಮನವಿ ಸಲ್ಲಿಸಲು ಬಂದ ರೈತರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಹರಿಹರ ಶಾಸಕ ಬಿ.ಪಿ. ಹರೀಶ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹರಿಹರದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆಗಮಿಸಿದ್ದ ಸಂದರ್ಭದಲ್ಲಿ, ಭದ್ರಾ ನಾಲೆಯಿಂದ ಸಮರ್ಪಕವಾಗಿ ನೀರು ಹರಿಹರ ಭಾಗಕ್ಕೆ ತಲುಪುತ್ತಿಲ್ಲ ಎಂದು ಕೆಲ ರೈತರು ಸಚಿವರ ಗಮನಕ್ಕೆ ತಂದಿದ್ದಾರೆ.
ಈ ವೇಳೆ ರೈತರು, “ಈ ಬಗ್ಗೆ ಶಾಸಕ ಬಿ.ಪಿ. ಹರೀಶ್ ಅವರನ್ನು ಕೇಳಿದರೆ ಸಚಿವರನ್ನೇ ಕೇಳಿ ಎಂದು ಹೇಳುತ್ತಿದ್ದಾರೆ” ಎಂದು ಸಚಿವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ಸಚಿವರು, ಶಾಸಕ ಬಿ.ಪಿ. ಹರೀಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾತಿನ ಭರದಲ್ಲಿ ಸಚಿವರು ಶಾಸಕರನ್ನು ಏಕವಚನದಲ್ಲಿ ಸಂಬೋಧಿಸಿ, ಆಕ್ಷೇಪಾರ್ಹ ಹಾಗೂ ಅಸಂಸದೀಯ ಪದಗಳನ್ನು ಬಳಸಿರುವುದು ವಿಡಿಯೋದಲ್ಲಿ ದಾಖಲಾಗಿದೆ ಎಂದು ಹೇಳಲಾಗಿದೆ. ಸಚಿವರ ಮಾತಿನ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.
ಭದ್ರಾ ನೀರು ಹಂಚಿಕೆ ವಿಚಾರ ಈಗ ರಾಜಕೀಯ ತಿರುವು ಪಡೆದುಕೊಂಡಿರುವ ಬೆನ್ನಲ್ಲೇ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹರಿಹರ ಬಿಜೆಪಿ ಶಾಸಕರ ನಡುವಿನ ಮಾತಿನ ಸಮರ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಕಂಡುಬಂದಿದೆ.
ಸಚಿವರ ಹೇಳಿಕೆಗೆ ಬಿಜೆಪಿ ನಾಯಕರು ಹಾಗೂ ಶಾಸಕ ಬಿ.ಪಿ. ಹರೀಶ್ ಅವರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. ಏತನ್ಮಧ್ಯೆ, ಸಾರ್ವಜನಿಕವಾಗಿ ಅಸಂಸದೀಯ ಪದ ಬಳಕೆಯಾಗಿದೆ ಎಂಬ ಆರೋಪದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ.






















