ವಿಜಯಪುರ: ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಸುಮಾರು 240 ಕೋಟಿ ರೂಪಾಯಿ ಬೃಹತ್ ಹಗರಣವಾಗಿದೆ, ಈ ಹಗರಣದಲ್ಲಿ ವಿಜಯೇಂದ್ರನಗಿಗೂ ಪಾಲು ಹೋಗಿದೆ ಧೈರ್ಯವಿದ್ದರೆ ಕೆಪಿಎಸ್‌ಸಿ ಹಗರಣದ ವಿರುದ್ಧ ವಿಜಯೇಂದ್ರ ಪಾದಯಾತ್ರೆ ಹೋರಾಟ ಮಾಡಲಿ ಎಂದು ನಗರ ಶಾಸಕ ಬಸನಗೌಡ ಪಾಟೀಲ ಸವಾಲು ಹಾಕಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಗರಣದಲ್ಲಿ ಯಾರಿಗೆ ಎಷ್ಟು? ಎಂದು ಮೊದಲೇ ನಿರ್ಧಾರವಾಗಿರುತ್ತದೆ. ಮುಖ್ಯಮಂತ್ರಿಗಳವರೆಗೂ ಪಾಲು ಹೋಗಿದೆ, ವಿಜಯೇಂದ್ರನಿಗೂ ಹೋಗಿದೆ. ಕೆಪಿಎಸ್‌ಸಿ ಅಧ್ಯಕ್ಷ ಸಾಹುಕಾರ್‌ಗೆ ಶೇ. 25 ಹಾಗೂ ವಿಜಯೇಂದ್ರಗೆ ಶೇ. 75 ರಷ್ಟು ಪಾಲು ಹೋಗಿದೆ ಎನ್ನುವ ಮೂಲಕ ವಿಜಯೇಂದ್ರ ಅವರೂ ಕೆಪಿಎಸ್‌ಸಿ ನೇಮಕಾತಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಯತ್ನಾಳ ಗಂಭೀರ ಆರೋಪ ಮಾಡಿದರು.
ವಿಜಯೇಂದ್ರ ಅಧಿಕಾರ, ಅಧ್ಯಕ್ಷತೆ ಉಳಿಸಿಕೊಳ್ಳಲು ಬಳ್ಳಾರಿ ಪಾದಯಾತ್ರೆಯ ನಾಟಕ ಮಾಡುತ್ತಿದ್ದಾನೆ. ಅಲ್ಲಿ ನಿಜವಾದ ಹೋರಾಟ ಮಾಡಿದ್ದು ಯಾರು? ಆರ್.ಅಶೋಕ, ನಾರಾಯಣಸ್ವಾಮಿ ಜೊತೆ ಇನ್ನಷ್ಟು ಜನ. ಅಲ್ಲಿ ಹತ್ತು ನಿಮಿಷವೂ ನಿಲ್ಲದೆ ವಿಜಯೇಂದ್ರ ಹೀರೋ ಆಗಲು ಹೊರಟಿದ್ದಾನೆ. ಆತ ಸಿಎಂ ಡಿಕೆಶಿ ಅಡಿಯಾಳಾಗಿ ಕೆಲಸ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಬಳ್ಳಾರಿ ಪಾದಯಾತ್ರೆಗೆ ಮೈತ್ರಿ ಪಕ್ಷದ ಕುಮಾರಸ್ವಾಮಿ ಏಕೆ ಬಂದಿಲ್ಲ. ಕಾಟಾಚಾರಕ್ಕೆ ಮಗನನ್ನು ಕಳುಹಿಸಿದ್ದಾರೆ ಅಷ್ಟೇ…
ಯಾರು ಕೆಪಿಎಸ್‌ಸಿ ಹಗರಣದ ವಿರುದ್ಧ ಧ್ವನಿ ಎತ್ತುತ್ತಾರೋ ಅಂದರೆ, ನನ್ನಂತವರು ಅವರಿಗೂ ಆಮಿಷ ಒಡ್ಡಲಾಗುತ್ತಿದೆ. ನಾನು ಕೆಪಿಎಸ್‌ಸಿ ವಿರುದ್ಧ ಮಾತನಾಡಿದೆ, ನನಗೂ ಕರೆ ಬಂದಿತ್ತು. ಲಿಂಗಾಯತರೇ ಇದ್ದಾರೆ ಸರ್ ಎಂದು ಸಮಜಾಯಿಸಿ ನೀಡಲು ಬಂದರು. ನಾನು ಇಂತಹದಕ್ಕೆ ಬೆಂಬಲ ನೀಡಲೇ ಯಾರೆ ಇರಲಿ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಖಡಕ್ ಆಗಿಯೇ ಹೇಳಿದ್ದೇನೆ ಎಂದರು.
ಡಿಗ್ರಿ ಫೇಲ್ ಆದವ ಕೆಪಿಎಸ್‌ಸಿಯಲ್ಲಿ ಟಾಪರ್ ಆಗಿದ್ದಾನೆ. ಒಬ್ಬ ಎಸಿ ಆಗಬೇಕಾದರೆ 2 ರಿಂದ 3 ಕೋಟಿ ಹಣ ಬೇಕು. ಹಣ ನೀಡಿ ಎಷ್ಟು ಜನ ಡಿವೈಎಸ್‌ಪಿ ಆಗಿದ್ದಾರೆ ಎಲ್ಲವೂ ತನಿಖೆಯಾಗಬೇಕು ಎಂದರು.
ಕುಮಾರಸ್ವಾಮಿ ಭೂಕಂಪ: ಗೃಹಮಂತ್ರಿ ಕೆಳಗಿಳಿಸುವ ಪ್ರಯತ್ನ ನಡೆದಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸುತ್ತೇನೆ, ನಂತರ ಭೂಕಂಪವೇ ಆಗಲಿದೆ ಎಂದು ಹೇಳಿದ್ದಾರೆ. ನಾವು ಸಂಪೂರ್ಣ ತಯಾರಿ ಮಾಡಿಕೊಂಡಿದ್ದೇವೆ. ಆದಷ್ಟು ಬೇಗ ಕುಮಾರಸ್ವಾಮಿ ಅವರ ಸುದ್ದಿಗೋಷ್ಠಿ ನಡೆಸಲಿ, ಸುದ್ದಿಗೋಷ್ಠಿ ಮುಗಿಯುವವರೆಗೂ ಮನೆಯಿಂದ ಹೊರಗಡೆ ಇರುತ್ತೇವೆ. ಭೂಕಂಪ ಆದ ಮೇಲೆ ಮನೆಯೊಳಗೆ ಬರುತ್ತೇವೆ ಎಂದರು.





















