ರೇಣುಕಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಗೆ ಹೈಕೋರ್ಟ್‌ನಲ್ಲಿ ಭಾಗಶಃ ಜಯ ಸಿಕ್ಕಿದೆ. ಸಹ ಆರೋಪಿ ಪ್ರದೋಷ್‌ನನ್ನು ‘ಮಾಫಿ ಸಾಕ್ಷಿ’ಯನ್ನಾಗಿ (ಅಪ್ರೂವರ್) ಪರಿಗಣಿಸುವ ಪ್ರಕ್ರಿಯೆಯನ್ನು ಪ್ರಶ್ನಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಭಾಗಶಃ ಪುರಸ್ಕರಿಸಿದೆ.
ಈ ಸಂಬಂಧ ಈ ಹಿಂದೆ ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಮಾರ್ಪಡಿಸಿರುವ ಹೈಕೋರ್ಟ್, ಮುಂದಿನ ಒಂದು ವಾರದೊಳಗೆ ಈ ಕುರಿತು ಹೊಸ ಆದೇಶ ಹೊರಡಿಸುವಂತೆ ಕೆಳ ನ್ಯಾಯಾಲಯಕ್ಕೆ ಸೂಚನೆ ನೀಡಿದೆ. ವಿಶೇಷವೆಂದರೆ, ಈ ಪ್ರಕ್ರಿಯೆಯಲ್ಲಿ ಯಾವುದೇ ಹೊಸ ವಾದ-ಪ್ರತಿವಾದಗಳಿಗೆ ಅವಕಾಶ ನೀಡದಂತೆ ಕೋರ್ಟ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ದರ್ಶನ್ ಆಕ್ಷೇಪವೇನಾಗಿತ್ತು?: ಈ ಹಿಂದೆ ಸೆಷನ್ಸ್ ಕೋರ್ಟ್‌ನಲ್ಲಿ ಪ್ರದೋಷ್‌ನ ಸನ್ನಡತೆ ಬಗ್ಗೆ ಪ್ರೊಬೇಷನರಿ ಅಧಿಕಾರಿ ವರದಿಯೊಂದನ್ನು ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ನಿಯಮದ ಪ್ರಕಾರ, ಪ್ರೊಬೇಷನರಿ ಅಧಿಕಾರಿ ಕೇವಲ ಶಿಕ್ಷೆಗೊಳಗಾದ ಕೈದಿಗಳ (ಸಜಾಬಂಧಿ) ಬಗ್ಗೆ ಮಾತ್ರ ವರದಿ ನೀಡಲು ಸಾಧ್ಯ. ಆದರೆ ಪ್ರದೋಷ್ ಸದ್ಯ ವಿಚಾರಣಾಧೀನ ಆರೋಪಿಯಾಗಿದ್ದಾನೆ.
ಕಾನೂನಿನ ಪ್ರಕಾರ ವಿಚಾರಣಾಧೀನ ಆರೋಪಿಯ ನಡವಳಿಕೆ ಬಗ್ಗೆ ವರದಿ ನೀಡಲು ಅವಕಾಶವಿಲ್ಲ. ಹೀಗಾಗಿ ಆ ವರದಿಯನ್ನು ರದ್ದುಗೊಳಿಸಬೇಕು ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು. ದರ್ಶನ್ ಅವರ ಈ ತಾಂತ್ರಿಕ ಆಕ್ಷೇಪವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಈಗ ಹಳೆಯ ಆದೇಶವನ್ನು ಮಾರ್ಪಡಿಸಲು ಸೂಚಿಸಿದೆ. ಇದು ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ತಿರುವು ಎಂದು ವಿಶ್ಲೇಷಿಸಲಾಗುತ್ತಿದೆ.




















