Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಪಡಿತರ ಧಾನ್ಯಗಳ ಅಕ್ರಮ ಸಾಗಾಟ ಶಂಕೆ: ಲಾರಿ ವಶಕ್ಕೆ

ಪಡಿತರ ಧಾನ್ಯಗಳ ಅಕ್ರಮ ಸಾಗಾಟ ಶಂಕೆ: ಲಾರಿ ವಶಕ್ಕೆ

0
77

ದಾವಣಗೆರೆ: ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಡಿತರ ಧಾನ್ಯಗಳ ಅಕ್ರಮ ಸಾಗಾಟ ನಡೆದಿದೆ ಎಂಬ ಶಂಕೆಯ ಮೇರೆಗೆ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಪೊಲೀಸರಿಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ, ನಗರದ ಹಳೆಯ ಪಿ.ಬಿ. ರಸ್ತೆಯ ಟಿವಿಎಸ್ ಶೋ ರೂಂ ಹಿಂಭಾಗದ ಪ್ರದೇಶದಲ್ಲಿ ಸಂಶಯಾಸ್ಪದವಾಗಿ ನಿಂತಿದ್ದ ಲಾರಿಯೊಂದನ್ನು ಪೊಲೀಸ್ ಅಧಿಕಾರಿಗಳು ತಡೆದಿದ್ದಾರೆ. ಬಳಿಕ ಲಾರಿಯನ್ನು ವಿದ್ಯಾನಗರ ಪೊಲೀಸ್ ಠಾಣೆಗೆ ತರಲಾಗಿದ್ದು, ಪರಿಶೀಲನೆ ನಡೆಸಲಾಗಿದೆ.

ಪರಿಶೀಲನೆ ವೇಳೆ ಲಾರಿಯಲ್ಲಿದ್ದ ಪ್ಲಾಸ್ಟಿಕ್ ಚೀಲಗಳಲ್ಲಿ 26.20 ಕ್ವಿಂಟಲ್ ರಾಗಿ ಸಂಗ್ರಹಿಸಿರುವುದು ಕಂಡು ಬಂದಿದೆ. ಅಧಿಕಾರಿಗಳು ಪರಿಶೀಲಿಸಿದಾಗ, ಈ ರಾಗಿ ಪಡಿತರ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ವಿತರಿಸುವ ಧಾನ್ಯವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.

ಇದೇ ವೇಳೆ, ಲಾರಿಯ ತಳಭಾಗದಲ್ಲಿದ್ದ ಕೆಲವು ಪ್ಲಾಸ್ಟಿಕ್ ಚೀಲಗಳಲ್ಲಿ 91 ಕ್ವಿಂಟಲ್ ಅಕ್ಕಿ ಹಾಗೂ ಸಾರವರ್ಧಿತ ಅಕ್ಕಿ ಸಹ ಪತ್ತೆಯಾಗಿದೆ. ಸರ್ಕಾರಿ ಯೋಜನೆಗಳಡಿ ವಿತರಿಸಲಾಗುವ ಅಕ್ಕಿ ಮತ್ತು ರಾಗಿಯನ್ನು ಗೋಣಿ ಚೀಲಗಳಿಂದ ತೆಗೆದು ಪ್ಲಾಸ್ಟಿಕ್ ಚೀಲಗಳಿಗೆ ಬದಲಾಯಿಸಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಲಾರಿಯ ಚಾಲಕ ಮತ್ತು ಮಾಲೀಕರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ, 1955ರ ಅಡಿ ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.