ದಾವಣಗೆರೆ: ಮಧ್ಯ ಕರ್ನಾಟಕದ ದಾವಣಗೆರೆ ನಗರದಲ್ಲಿ ಶನಿವಾರ ಬೆಳಗ್ಗಿನಿಂದಲೇ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆಯ ಸಂಭ್ರಮ ಮನೆಮಾಡಿದೆ. ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಹಿಂದೂ ಮಹಾಗಣಪತಿಯ ಒಂಬತ್ತನೇ ವರ್ಷದ ಗಣೇಶ ಮೂರ್ತಿಯ ವಿಸರ್ಜನಾ ಬೃಹತ್ ಶೋಭಾಯಾತ್ರೆಗೆ ಶಾಸಕ ಸಮರ್ಥ್ ಶಾಮನೂರು ಚಾಲನೆ ನೀಡಿದರು.
ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳು ಕೇಸರಿ ಧ್ವಜಗಳು, ಬಂಟಿಂಗ್ಸ್ ಹಾಗೂ ರಂಗೋಲಿಗಳಿಂದ ಅಲಂಕೃತಗೊಂಡಿದ್ದವು. ಬೆಳಗ್ಗೆಯಿಂದಲೇ ವಿವಿಧ ಪ್ರದೇಶಗಳಿಂದ ಭಕ್ತರು ನಗರಕ್ಕೆ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳು ಜನರಿಂದ ತುಂಬಿಕೊಂಡಿದ್ದವು.
ಬೆಳಗ್ಗೆ 11.30ರ ಸುಮಾರಿಗೆ ಆರಂಭವಾದ ಶೋಭಾಯಾತ್ರೆಯಲ್ಲಿ ವಿವಿಧ ಕಲಾತಂಡಗಳು, ಚಂಡೆ ವಾದ್ಯ, ನಾಸಿಕ್ ಢೋಲ್ ಸೇರಿದಂತೆ ಹಲವು ಸಾಂಸ್ಕೃತಿಕ ತಂಡಗಳು ಭಾಗವಹಿಸಿವೆ. ವಿವಿಧ ಕಲಾ ಪ್ರದರ್ಶನಗಳೊಂದಿಗೆ ಮೆರವಣಿಗೆ ಸಾಗುತ್ತಿದ್ದರೆ, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ 64 ಅಡಿ ಎತ್ತರದ ಬೃಹತ್ ಮಾದರಿ ಕೂಡ ಒಂದಾಗಿತ್ತು. ಗಣೇಶ ಮೂರ್ತಿಯ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಭಕ್ತರು ಪುಷ್ಪವೃಷ್ಠಿ ಮಾಡುವ ಮೂಲಕ ಭಕ್ತಿ ಸಮರ್ಪಿಸಿದರು. ನಗರದ ವಿವಿಧ ಭಾಗಗಳಿಂದ ಆಗಮಿಸಿದ ಜನರು ಮೆರವಣಿಗೆಯನ್ನು ವೀಕ್ಷಿಸಿದರು.
ವಿದ್ಯಾರ್ಥಿಗಳು, ಯುವಜನರ ಉತ್ಸಾಹ : ಶನಿವಾರ ಬೆಳಗಿನ ತರಗತಿಗಳು ಮುಗಿದ ಬಳಿಕ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಗುಂಪು ಗುಂಪಾಗಿ ಶೋಭಾಯಾತ್ರೆಯತ್ತ ಆಗಮಿಸಿದರು. ಯುವಜನರು ಹಾಗೂ ವಿದ್ಯಾರ್ಥಿಗಳ ಹೆಚ್ಚಿನ ಪಾಲ್ಗೊಳ್ಳುವಿಕೆಯಿಂದ ಮೆರವಣಿಗೆ ಮತ್ತಷ್ಟು ಕಳೆಗಟ್ಟಿತು.
ಮೆರವಣಿಗೆ ಸಾಗುವ ಪ್ರಮುಖ ಮಾರ್ಗಗಳಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಉಪಾಹಾರ, ಕುಡಿಯುವ ನೀರು, ಪಾನಕ ಮತ್ತು ತಂಪು ಪಾನೀಯಗಳನ್ನು ವಿತರಿಸುವ ಮೂಲಕ ಸೇವೆ ಸಲ್ಲಿಸಿದರು. ಹಲವು ಕಡೆ ಅನ್ನದಾಸೋಹದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಸಂಚಾರ ಮತ್ತು ಭದ್ರತೆಗೆ ವಿಶೇಷ ವ್ಯವಸ್ಥೆ : ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ತೊಂದರೆಯಾಗದಂತೆ ಆಯೋಜಕರು ಸ್ವಯಂಸೇವಕರ ತಂಡಗಳನ್ನು ನಿಯೋಜಿಸಿದ್ದಾರೆ. ಪೊಲೀಸರು ಹಾಗೂ ಸ್ವಯಂಸೇವಕರು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ಮೆರವಣಿಗೆಯ ಸುಗಮ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್ ಅವರ ನೇತೃತ್ವದಲ್ಲಿ ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಸಶಸ್ತ್ರ ಪಡೆಗಳು ಹಾಗೂ ಕೆಆರ್‌ಪಿಎಫ್ ಸಿಬ್ಬಂದಿಯನ್ನೂ ಭದ್ರತೆಗೆ ಬಳಸಲಾಗಿದೆ. ಸಿಸಿ ಕ್ಯಾಮೆರಾಗಳ ಮೂಲಕ ನಿಗಾ ಇರಿಸಲಾಗಿದ್ದು, ಡ್ರೋನ್ ಕ್ಯಾಮೆರಾಗಳ ಬಳಕೆಯೂ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ಅಕ್ಟೋಬರ್ 3ರಂದು ಬೆಳಗ್ಗೆ 10ರಿಂದ ರಾತ್ರಿ 11ರವರೆಗೆ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಜಿಲ್ಲಾಡಳಿತ ಹಾಗೂ ಪೊಲೀಸರು ಮನವಿ ಮಾಡಿದ್ದಾರೆ.
ಬಾತಿ ಕೆರೆಯಲ್ಲಿ ವಿಸರ್ಜನೆ : ಹೈಸ್ಕೂಲ್ ಮೈದಾನದಿಂದ ಆರಂಭವಾದ ಶೋಭಾಯಾತ್ರೆ ಎವಿಕೆ ಮಹಿಳಾ ಕಾಲೇಜು ರಸ್ತೆ, ಚೇತನ ಹೋಟೆಲ್, ವಿದ್ಯಾರ್ಥಿ ಭವನ ವೃತ್ತ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಕುವೆಂಪು ರಸ್ತೆ, ಬಿ. ರಸ್ತೆ, ಪಿ.ಬಿ. ರಸ್ತೆ, ಗಾಂಧಿ ವೃತ್ತ, ಹಳೆಯ ಬಸ್ ನಿಲ್ದಾಣ, ಮಹಾನಗರಪಾಲಿಕೆ, ಪಿ.ಜೆ. ಬಡಾವಣೆ ವೃತ್ತ, ಅರುಣ್ ಸರ್ಕಲ್, ತೋಟಗಾರಿಕೆ ಇಲಾಖೆ ಕಚೇರಿ, ಪೂಜಾ ಇಂಟರ್‌ನ್ಯಾಷನಲ್ ಹೋಟೆಲ್ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಬಾತಿ ಕೆರೆಯನ್ನು ತಲುಪಲಿದೆ.
ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಬೇಕಿರುವುದರಿಂದ ವಿಸರ್ಜನಾ ಸ್ಥಳ ತಲುಪುವ ವೇಳೆಗೆ ರಾತ್ರಿ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಚಾರ ಮತ್ತು ಭದ್ರತಾ ವ್ಯವಸ್ಥೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಇದರಿಂದಾಗಿ ದಾವಣಗೆರೆಯಲ್ಲಿ ಶನಿವಾರ ದಿನವಿಡೀ ಗಣಪತಿ ಭಕ್ತಿ, ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ನಡುವೆ ವಿಸರ್ಜನಾ ಶೋಭಾಯಾತ್ರೆ ಸಾಗುತ್ತಿದೆ.
- India vs Pakistan Final: ಭಾರತೀಯ ಪಾಳಯದಲ್ಲಿ ಆತಂಕ: ಪಾಕ್ ಗೆಲುವಿಗೆ ಕೊನೆ 18 ಎಸೆತಗಳಲ್ಲಿ 52 ರನ್ ಅಗತ್ಯ
- ಕೇಸರಿಮಯವಾದ ಬೆಣ್ಣೆನಗರಿ ದಾವಣಗೆರೆ : ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ಅದ್ದೂರಿ ಚಾಲನೆ
- ಬೌಂಡರಿ ಲೈನ್ನಲ್ಲಿ ಸೂರ್ಯವಂಶಿ-ಬಿಷ್ಣೋಯ್ ಡಿಕ್ಕಿ: ಭಾರತದ ಬಿಗಿಹಿಡಿತಕ್ಕೆ ಪಾಕ್ ಕಂಗಾಲು!
- ಏಷ್ಯನ್ ಗೇಮ್ಸ್ನಲ್ಲಿ ಸಾಧನೆ ಮಾಡಿದ ಕರ್ನಾಟಕದ ಹೆಮ್ಮೆಯ ಪೂವಮ್ಮಗೆ ಡಿಕೆಶಿ ಅಭಿನಂದನೆ
- ಬಿಗ್ಬಾಸ್ 13: ಮಂಜನಿಗೆ ಹೈಜಾಕರ್ ಗಾನವಿ ಸಖತ್ ಕಾಂಪಿಟೇಷನ್; ಇಬ್ಬರೂ ಜೈಲು ಪಾಲು!






















