SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಸಿಟಿ ರವಿ ಭಾಗಿ

ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಸಿಟಿ ರವಿ ಭಾಗಿ

0
22

ಚಿತ್ರದುರ್ಗ: ನಗರದಲ್ಲಿ ಶನಿವಾರ ಆಯೋಜಿಸಿದ್ದ ಹಿಂದೂ ಮಹಾಗಣಪತಿ ವೈಭವದ ಶೋಭಾಯಾತ್ರೆಯಲ್ಲಿ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಭಾಗಿಯಾಗಿ, ಹಿಂದೂ ಮಹಾಗಣಪತಿ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದರು.

ಗಣೇಶೋತ್ಸವದ ಮೆರವಣಿಗೆಯಲ್ಲಿ ಹಿಂದೂ ಸಮಾಜದ ವಿರಾಟ ಸ್ವರೂಪದ ದರ್ಶನವಾಗಿದೆ ಎಂದು ಹೇಳಿದ ಸಿ.ಟಿ.ರವಿ, ಗಣಪತಿ ಇರೋದೇ ಹಿಂದೂ ಒಗ್ಗೂಡುವಿಕೆಗಾಗಿ. ಗಣಪತಿ ಇರೋದು ಅಸ್ಪೃಶ್ಯತೆ, ಜಾತಿ ವ್ಯವಸ್ಥೆಯನ್ನು ಅಳಿಸಲು. ಗಣೇಶೋತ್ಸವದಿಂದ ನಾವೆಲ್ಲ ಒಂದು, ನಾವೆಲ್ಲ ಹಿಂದೂ ಎಂಬ ಭಾವನೆ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.

ಅಸ್ಪೃಶ್ಯತೆ, ಜಾತಿ ವ್ಯವಸ್ಥೆಗೆ ಸಾರ್ವಜನಿಕವಾಗಿ ಜಾಗ ಇಲ್ಲ ಎಂಬುದನ್ನು ಈ ಉತ್ಸವ ತೋರಿಸುತ್ತದೆ. ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ಬಂಧುತ್ವದ ಭಾವ ಜಾಗೃತಗೊಳ್ಳಲಿ, ರಾಷ್ಟ್ರಹಿತಕ್ಕಾಗಿ ಸಮಾಜ ಎದ್ದು ನಿಲ್ಲಲಿ ಎಂದು ಅವರು ಕರೆ ನೀಡಿದರು.
ಇದೇ ವೇಳೆ ಮತದಾರರ ಪಟ್ಟಿಯಿಂದ ಮತ ಡಿಲೀಟ್ ವಿಚಾರದ ಬಗ್ಗೆ ಮಾತನಾಡಿದ ಸಿ.ಟಿ.ರವಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಶೇ.90 ರಷ್ಟು ಹಿಂದೂಗಳ ಮತ ಡಿಲೀಟ್ ಆಗಿದ್ದು ಆಘಾತಕಾರಿ. ಮುಸ್ಲಿಮರ ಮತ ಡಿಲೀಟ್ ಎಂದು ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿದೆ. ಆದರೆ ಹಿಂದೂ ಮತಗಳನ್ನು ಉದ್ದೇಶಪೂರ್ವಕವಾಗಿ ಡಿಲೀಟ್ ಮಾಡಿಸಿದ್ದಾರೆ. ಆ ಅಂಶ ಹೊರಬರಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ” ಎಂದು ಆರೋಪಿಸಿದರು. ಚಿಕ್ಕಮಗಳೂರಿನ ಉದಾಹರಣೆ ನೀಡಿದ ಅವರು, ಚಿಕ್ಕಮಗಳೂರಿನಲ್ಲಿ 37 ಸಾವಿರ ಮತ ಡಿಲೀಟ್ ಆಗಿವೆ. 37 ಸಾವಿರ ಮತಗಳ ಪೈಕಿ 32 ಸಾವಿರ ಹಿಂದೂಗಳ ಮತ ಡಿಲೀಟ್ ಆಗಿವೆ ಎಂದು ಹೇಳಿದರು.

ಕಾಂಗ್ರೆಸ್ ನ ವರ್ತನೆಯನ್ನು ಟೀಕಿಸಲು ಅವರು ಒಂದು ಕಥೆಯನ್ನು ಹೇಳಿದರು. ಸಂತೆಯಲ್ಲಿ ಉಪ್ಪು, ಬೆಲ್ಲ, ತೆಂಗು ಮಾರುವವರು ಇದ್ದರಂತೆ. ಮಳೆ ಬಂದು ಉಪ್ಪು, ಬೆಲ್ಲ ಕರಗಿ ಹೋಯಿತಂತೆ. ತೆಂಗು ಮಾರುವವ ಎದೆ ಬಡಿದುಕೊಳ್ಳುತ್ತಿದ್ದನಂತೆ. ಹಾಗೇ ಕಾಂಗ್ರೆಸ್ ಬೊಬ್ಬೆ ಹೊಡೆದುಕೊಳ್ಳುತ್ತಿದೆ ಎಂದು ವ್ಯಂಗ್ಯವಾಡಿದರು.

ಬಾಂಗ್ಲಾದೇಶಿಯರ ಸೇರ್ಪಡೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಇದರ ಕಾರಣಕರ್ತರ ಮೇಲೆ ಸಮಗ್ರ ತನಿಖೆ ನಡೆಸಬೇಕು. ಇದೊಂದು ರೀತಿ ದೇಶದ್ರೋಹ, ಕ್ರಮ ಕೈಗೊಳ್ಳಬೇಕು. ಬಾಂಗ್ಲಾದೇಶದವರಿಗೆ ಮತ ಕೊಡಿಸುವುದು ನಿಮ್ಮ ಹಕ್ಕಾ? ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಿ.ಟಿ.ರವಿ ಕಿಡಿಕಾರಿದರು.

ಬಾಂಗ್ಲಾದೇಶಿಯರ ಪರ ಮತ ಕೇಳುವುದು, ನೀವು ಯಾರು ಎಂಬ ಪ್ರಶ್ನೆ ಮೂಡುತ್ತದೆ. ಫಾರಂ 7ರ ಪ್ರಕಾರ ಆಕ್ಷೇಪ ಸಲ್ಲಿಸುವುದು ಅಪರಾಧನಾ? ಅಧಿಕಾರಿಗಳು ಸಮಗ್ರ ಪರಿಶೀಲನೆ ಮಾಡಲಿ. ಅಕ್ರಮ ಆಗಿದ್ದರೆ ಡಿಲೀಟ್ ಮಾಡಲಿ, ಸಕ್ರಮ ಆಗಿದ್ದರೆ ಉಳಿಸಿಕೊಳ್ಳಲಿ. ಅಕ್ರಮವನ್ನು ಮುಚ್ಚಿ ಹಾಕಲು ಅವರೇ ಬಾಯಿ ಬಡಿದುಕೊಳ್ಳುತ್ತಿದ್ದಾರೆ” ಎಂದು ಸಿಎಂ ವಿರುದ್ಧವೂ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ರೆಸಿಡೆನ್ಷಿಯಲ್ ಸರ್ಟಿಫಿಕೇಟ್ ಕೊಡುತ್ತಿರುವವರು ಯಾರು? ಆಧಾರ್ ಕಾರ್ಡ್ ಮಾಡಿಕೊಡುತ್ತಿರುವವರು ಯಾರು? ಈ ಬಗ್ಗೆ ತನಿಖೆ ಆಗಲಿ ಎಂದು ಸಿ.ಟಿ.ರವಿ ಒತ್ತಾಯಿಸಿದರು.