ದಾವಣಗೆರೆ: ಶ್ರೀಮಂತ ಯುವಕರನ್ನು ಗುರಿಯಾಗಿಸಿಕೊಂಡು ಅಪಹರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಆರೋಪದಡಿ 10 ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಬಟ್ಟೆ ವ್ಯಾಪಾರಿಯೊಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿ 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಬಂಧಿತರ ಮೇಲಿದೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಕಾರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಣಕಾಸಿನ ವ್ಯವಹಾರದ ನೆಪ: ದಾವಣಗೆರೆಯ ಬಟ್ಟೆ ವ್ಯಾಪಾರಿಯೊಬ್ಬರನ್ನು ಹಣಕಾಸಿನ ವ್ಯವಹಾರದ ಕುರಿತು ಮಾತನಾಡಬೇಕಿದೆ ಎಂದು ಪರಿಚಿತನಾದ ಅಬ್ಬಾಸ್ ಎಂಬಾತ ಶಾಮನೂರು ಸಮೀಪದ ಸಮುದಾಯ ಭವನದ ಬಳಿ ಕರೆಸಿಕೊಂಡಿದ್ದ ಎನ್ನಲಾಗಿದೆ. ಅಲ್ಲಿಗೆ ಕಾರಿನಲ್ಲಿ ಬಂದ ಆರೋಪಿಗಳು ವ್ಯಾಪಾರಿಯನ್ನು ಆಂಜನೇಯ ಬಡಾವಣೆಯಲ್ಲಿರುವ ಮನೆಯೊಂದಕ್ಕೆ ಕರೆದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
10 ಲಕ್ಷಕ್ಕೆ ಬೇಡಿಕೆ: ಮನೆಯೊಂದರಲ್ಲಿ ವ್ಯಾಪಾರಿಯ ಮೇಲೆ ಮರದ ತುಂಡು ಹಾಗೂ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ, ತಂದೆಗೆ ಕರೆ ಮಾಡಿ 10 ಲಕ್ಷ ಹಣ ತರುವಂತೆ ಒತ್ತಡ ಹೇರಲಾಗಿದೆ ಎನ್ನಲಾಗಿದೆ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂಬ ಆರೋಪವೂ ಕೇಳಿ ಬಂದಿದೆ.
ಲೈವ್ ಲೊಕೇಶನ್‌ನಿಂದ ಸುಳಿವು: ಪ್ರಕರಣದಲ್ಲಿ ಸಂತ್ರಸ್ತನ ಮೊಬೈಲ್‌ನ ಲೈವ್ ಲೊಕೇಶನ್ ಪೊಲೀಸರಿಗೆ ಹಾಗೂ ಕುಟುಂಬಸ್ಥರಿಗೆ ಪ್ರಮುಖ ಸುಳಿವು ನೀಡಿದೆ ಎನ್ನಲಾಗಿದೆ. ಸಂತ್ರಸ್ತ ಪ್ರತಿದಿನ ಕುಟುಂಬದ ವಾಟ್ಸಾಪ್ ಗ್ರೂಪ್‌ನಲ್ಲಿ ಲೈವ್ ಲೊಕೇಶನ್ ಹಂಚಿಕೊಳ್ಳುತ್ತಿದ್ದ ಕಾರಣ, ಕುಟುಂಬಸ್ಥರು ಅದನ್ನು ಆಧರಿಸಿ ಆಂಜನೇಯ ಬಡಾವಣೆ ಪ್ರದೇಶದಲ್ಲಿ ಹುಡುಕಾಟ ನಡೆಸಿದ್ದಾರೆ.
ಕುಟುಂಬಸ್ಥರು ಹಾಗೂ ಸಾರ್ವಜನಿಕರು ಸ್ಥಳದಲ್ಲಿ ಸೇರುತ್ತಿರುವುದನ್ನು ಗಮನಿಸಿದ ಆರೋಪಿಗಳು ಸಂತ್ರಸ್ತನನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
10 ಮಂದಿ ಬಂಧನ: ಘಟನೆ ಬಳಿಕ ಸಂತ್ರಸ್ತ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಗಂಗಾರಾಮ ಪವಾರ್ ಅಲಿಯಾಸ್ ಬಬ್ಲು ಸೇರಿದಂತೆ ಒಟ್ಟು 10 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಕಾರನ್ನೂ ವಶಕ್ಕೆ ಪಡೆಯಲಾಗಿದೆ.
ಬಂಧಿತರ ಪೈಕಿ ಗಂಗಾರಾಮ ಪವಾರ್ ವಿರುದ್ಧ ದಾವಣಗೆರೆ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಒಟ್ಟು ಮೂರು ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.






















