SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಪ್ರೀತಿಸಿ ಕೈಬಿಟ್ಟ ಯುವಕ; ಮಗಳ ನೋವಿನಲ್ಲಿ ತಂದೆಯ ದಾರುಣ ಅಂತ್ಯ

ಪ್ರೀತಿಸಿ ಕೈಬಿಟ್ಟ ಯುವಕ; ಮಗಳ ನೋವಿನಲ್ಲಿ ತಂದೆಯ ದಾರುಣ ಅಂತ್ಯ

0
4

ದಾವಣಗೆರೆ: ಮಗಳು ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದು, ಬಳಿಕ ಆತ ಮದುವೆಯಾಗುವುದಾಗಿ ನಂಬಿಸಿ ಕೈಬಿಟ್ಟಿದ್ದಾನೆ ಎಂಬ ವಿಚಾರದಿಂದ ಮನನೊಂದು ಯುವತಿಯ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲೂಕಿನ ಸಾರಥಿ-ಹೊಸೂರು ಗ್ರಾಮದಲ್ಲಿ ನಡೆದಿದೆ.

ಯುವಕ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಬಳಿಕ ಯುವತಿಯನ್ನು ಕೈಬಿಟ್ಟಿದ್ದಾನೆ ಎಂದು ಆರೋಪಿಸಿ, ಯುವತಿಯ ಕುಟುಂಬದವರು ಕಳೆದ ಆಗಸ್ಟ್‌ನಲ್ಲಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದರು. ಆದರೆ, ದೂರು ದಾಖಲಾದರೂ ಪೊಲೀಸರು ಯುವಕನನ್ನು ಬಂಧಿಸಿಲ್ಲ. ಬದಲಾಗಿ ಯುವತಿಯ ಕುಟುಂಬದವರ ಮೇಲೆಯೇ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಮೃತರ ಸಂಬಂಧಿಕರಾದ ರಂಗಸ್ವಾಮಿ ಹಾಗೂ ಷಣ್ಮುಖ ಆರೋಪಿಸಿದ್ದಾರೆ.

ಯುವಕನನ್ನು ಬಂಧಿಸದಿರುವುದೇ ಹನುಮಂತಪ್ಪ ಅವರ ಸಾವಿಗೆ ಕಾರಣ ಎಂದು ಆರೋಪಿಸಿದ ಸಂಬಂಧಿಕರು, ಮೃತದೇಹವನ್ನು ಚನ್ನಗಿರಿ ಪೊಲೀಸ್ ಠಾಣೆಗೆ ತಂದು ಪ್ರತಿಭಟನೆ ನಡೆಸಲು ಮುಂದಾದರು. ಆದರೆ, ಪೊಲೀಸರು ಠಾಣೆಯ ಗೇಟಿನ ಬಳಿಯೇ ಅವರನ್ನು ತಡೆದರು. ಬಳಿಕ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿ ಶವಾಗಾರದಲ್ಲಿ ಇರಿಸಲಾಯಿತು.

ಈ ಕುರಿತು ಇನ್ಸ್‌ಪೆಕ್ಟರ್ ರವೀಶ್ ಪ್ರತಿಕ್ರಿಯಿಸಿ, ಪೋಕ್ಸೋ ಪ್ರಕರಣ ದಾಖಲಾದ ಬಳಿಕ ಯುವಕನ ಕಡೆಯವರು ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದಿದ್ದರು. ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 10ಕ್ಕೆ ನಿಗದಿಪಡಿಸಲಾಗಿದ್ದು, ವಿಚಾರಣೆ ಪೂರ್ಣಗೊಳ್ಳುವವರೆಗೆ ಯಾರನ್ನೂ ಬಂಧಿಸಬಾರದು ಎಂದು ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಯುವಕನನ್ನು ಬಂಧಿಸಿಲ್ಲ ಎಂದು ತಿಳಿಸಿದ್ದಾರೆ.