SK Home Ad
Home ಸುದ್ದಿ ದೇಶ CNG ತುಂಬಿಸುವಾಗ ಕಾರಿನ ಸಿಲಿಂಡರ್ ಸ್ಫೋಟ: ವೈರಲ್ ಆಯ್ತು ಭಯಾನಕ CCTV ದೃಶ್ಯ

CNG ತುಂಬಿಸುವಾಗ ಕಾರಿನ ಸಿಲಿಂಡರ್ ಸ್ಫೋಟ: ವೈರಲ್ ಆಯ್ತು ಭಯಾನಕ CCTV ದೃಶ್ಯ

0
615
CNG ರಿಫಿಲ್ಲಿಂಗ್ ವೇಳೆ ಕಾರಿನಲ್ಲಿ ಸ್ಫೋಟ; ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿತು

ವಡೋದರಾ: ಗುಜರಾತ್‌ನ ವಡೋದರಾ ಜಿಲ್ಲೆಯ ಕರ್ಜನ್ ಸಮೀಪ ರಾಷ್ಟ್ರೀಯ ಹೆದ್ದಾರಿ-48ರಲ್ಲಿರುವ CNG ಪಂಪ್‌ನಲ್ಲಿ ಕಾರಿಗೆ ಇಂಧನ ತುಂಬಿಸುವ ವೇಳೆ ಸಂಭವಿಸಿದ ಸ್ಫೋಟದ ದೃಶ್ಯಗಳು ಇದೀಗ ಗಮನ ಸೆಳೆಯುತ್ತಿವೆ. ಅಕ್ಟೋಬರ್ 1ರಂದು ನಡೆದ ಈ ಘಟನೆ ಪಂಪ್‌ನ CCTV ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಫೋಟದ ತೀವ್ರತೆ ದೃಶ್ಯಗಳಲ್ಲಿ ಕಂಡುಬಂದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕರ್ಜನ್‌ನ ಜಿಂದಾಲ್ ಕಂಪನಿ ಎದುರಿನ CNG ಸ್ಟೇಷನ್‌ನಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಕಾರಿಗೆ CNG ತುಂಬಿಸಲಾಗುತ್ತಿತ್ತು. ಈ ವೇಳೆ ವಾಹನದ CNG ಟ್ಯಾಂಕ್‌ ಸ್ಫೋಟಗೊಂಡಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಸ್ಫೋಟದ ರಭಸಕ್ಕೆ ಕಾರಿನ ಹಿಂಭಾಗದ ಭಾಗಗಳು ಹಾಗೂ ಗಾಜಿನ ಚೂರುಗಳು ಹಲವು ಮೀಟರ್ ದೂರಕ್ಕೆ ಚಿಮ್ಮಿವೆ. ಸಮೀಪದಲ್ಲಿ ನಿಲ್ಲಿಸಿದ್ದ ಇನ್ನೆರಡು ವಾಹನಗಳಿಗೂ ಹಾನಿಯಾಗಿದೆ.

CCTV ದೃಶ್ಯಗಳಲ್ಲಿ CNG ತುಂಬಿಸುವ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲೇ ಏಕಾಏಕಿ ಸ್ಫೋಟ ಸಂಭವಿಸಿರುವುದು ಕಂಡುಬರುತ್ತದೆ. ಕೆಲವೇ ಸೆಕೆಂಡುಗಳಲ್ಲಿ ವಾಹನದ ಹಿಂಭಾಗಕ್ಕೆ ಭಾರೀ ಹಾನಿಯಾಗಿದ್ದು, ಪಂಪ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.

ಸ್ಫೋಟದ ನಂತರ ಕರ್ಜನ್ ಅಗ್ನಿಶಾಮಕ ದಳ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಪಂಪ್‌ನ CNG ವಿಭಾಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಘಟನೆಯ ಕಾರಣದ ಕುರಿತು ಪರಿಶೀಲನೆ ಆರಂಭಿಸಲಾಗಿದೆ ಎಂದು ವರದಿಯಾಗಿದೆ.

ಸ್ಫೋಟಕ್ಕೆ ಕಾರಣವೇನು? : CNG ಟ್ಯಾಂಕ್ ಏಕೆ ಸ್ಫೋಟಿಸಿತು ಎಂಬುದು ಇನ್ನೂ ಅಧಿಕೃತವಾಗಿ ಸ್ಪಷ್ಟವಾಗಿಲ್ಲ. ತಾಂತ್ರಿಕ ದೋಷ, ಅತಿಯಾದ ಒತ್ತಡ ಅಥವಾ ವಾಹನದ CNG ವ್ಯವಸ್ಥೆಯಲ್ಲಿನ ಸಮಸ್ಯೆ ಸೇರಿದಂತೆ ವಿವಿಧ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕವೇ ನಿಖರ ಕಾರಣ ತಿಳಿಯಲಿದೆ.

ಘಟನೆಯ CCTV ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, CNG ವಾಹನಗಳಿಗೆ ಇಂಧನ ತುಂಬಿಸುವ ಸಂದರ್ಭದಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯದ ಕುರಿತು ಚರ್ಚೆಗೂ ಕಾರಣವಾಗಿದೆ.