SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಶೋಭಾಯಾತ್ರೆಯಲ್ಲಿ ಗಮನ ಸೆಳೆದ ರೈತನ ಸಂಕಷ್ಟದ ಬಾವುಟ!

ಶೋಭಾಯಾತ್ರೆಯಲ್ಲಿ ಗಮನ ಸೆಳೆದ ರೈತನ ಸಂಕಷ್ಟದ ಬಾವುಟ!

0
38

‘ರೈತನ ಬೆಳೆಗೆ ಬೆಲೆ ಇಲ್ಲ, ಸೈನಿಕನ ಸಾವಿಗೆ ಕೊನೆ ಇಲ್ಲ’: ಗಣೇಶನಿಗೆ ನಿವೇದನೆಯಂತೆ ಕಂಡ ಯುವಕನ ಪ್ರಯತ್ನ

ದಾವಣಗೆರೆ: ಒಂದೆಡೆ ಡಿಜೆ ಸದ್ದಿಗೆ ಯುವಕ-ಯುವತಿಯರ ಸಂಭ್ರಮ, ಮತ್ತೊಂದೆಡೆ ಜಾನಪದ ಕಲಾತಂಡಗಳ ಪ್ರದರ್ಶನ… ಹೀಗೆ ಹಿಂದೂ ಮಹಾಗಣಪತಿ ಬೃಹತ್ ಶೋಭಾಯಾತ್ರೆ ಅದ್ಧೂರಿಯಾಗಿ ಸಾಗುತ್ತಿದ್ದ ನಡುವೆ ರೈತರ ಸಂಕಷ್ಟವನ್ನು ಬಿಂಬಿಸುವ ಬಾವುಟವೊಂದು ನೆರೆದಿದ್ದವರ ಗಮನ ಸೆಳೆಯಿತು.

ಮೆರವಣಿಗೆಯಲ್ಲಿ ಯುವಕನೊಬ್ಬ ‘ರೈತನ ಬೆಳೆಗೆ ಬೆಲೆ ಇಲ್ಲ, ಸೈನಿಕನ ಸಾವಿಗೆ ಕೊನೆ ಇಲ್ಲ’ ಎಂಬ ಹಿಂಬರಹವಿದ್ದ ಬಾವುಟವನ್ನು ಹಿಡಿದು ಸಾಗುತ್ತಿದ್ದನು. ಶೋಭಾಯಾತ್ರೆಯ ಸಂಭ್ರಮದ ನಡುವೆ ಈ ಬರಹ ರೈತರ ಬದುಕಿನ ಮತ್ತೊಂದು ಮುಖವನ್ನು ತೆರೆದಿಟ್ಟಿತು.

ಈ ಬಾರಿ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರಗಳಿಂದ ರೈತರಿಗೆ ನಿರೀಕ್ಷಿತ ನೆರವು ಸಿಗುತ್ತಿಲ್ಲ ಎಂಬ ಬೇಸರವನ್ನು ಬಾವುಟದ ಮೂಲಕ ವ್ಯಕ್ತಪಡಿಸುವ ಪ್ರಯತ್ನ ಇದಾಗಿರಬಹುದು ಎಂಬಂತೆ ಕಂಡುಬಂತು. ರೈತ ಕುಟುಂಬಕ್ಕೆ ಸೇರಿದ ಯುವಕನೊಬ್ಬ ತನ್ನ ನೋವು-ನಿರೀಕ್ಷೆಯನ್ನು ಶೋಭಾಯಾತ್ರೆಯ ಮೂಲಕ ಗಣೇಶಮೂರ್ತಿಗೆ ನಿವೇದಿಸಿಕೊಂಡಂತೆ ಭಾಸವಾಯಿತು.

ಮಜ್ಜಿಗೆ ವಿತರಣೆ – ಕುಣಿಯುವವರ ಮೇಲೂ ಚಿಮ್ಮಾಟ: ಇದೇ ವೇಳೆ ಶೋಭಾಯಾತ್ರೆಯಲ್ಲಿ ಸಾಗುತ್ತಿದ್ದ ಯುವಕರು, ಯುವತಿಯರು ಹಾಗೂ ಭಕ್ತರು ಅಲ್ಲಲ್ಲಿ ಮಜ್ಜಿಗೆ ವಿತರಿಸುವ ಮೂಲಕ ಸೇವಾ ಮನೋಭಾವ ಮೆರೆದರು. ಬಿಸಿಲಿನ ನಡುವೆಯೂ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಮಜ್ಜಿಗೆ ನೀಡಲಾಯಿತು.

ಕೆಲವೆಡೆ ಮಜ್ಜಿಗೆ ಕುಡಿಯುತ್ತಿದ್ದವರ ಜತೆಗೆ, ಕುಣಿಯುತ್ತಿದ್ದ ಯುವಕರ ಮೇಲೆಯೂ ಮಜ್ಜಿಗೆ ಚಿಮ್ಮಿಸಿ ಸಂಭ್ರಮಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಇದರಿಂದ ಶೋಭಾಯಾತ್ರೆಯ ಉತ್ಸಾಹ ಮತ್ತಷ್ಟು ಹೆಚ್ಚಾಗಿತ್ತು.