SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಪಂಚಮಸಾಲಿ ಪೀಠದ ₹10 ಕೋಟಿ ಅನುದಾನ ದುರುಪಯೋಗ ಆರೋಪ: ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಪಂಚಮಸಾಲಿ ಪೀಠದ ₹10 ಕೋಟಿ ಅನುದಾನ ದುರುಪಯೋಗ ಆರೋಪ: ನಿಷ್ಪಕ್ಷಪಾತ ತನಿಖೆಗೆ ಆಗ್ರಹ

0
92

ದಾವಣಗೆರೆ: ಹರಿಹರ ಪಂಚಮಸಾಲಿ ಪೀಠಕ್ಕೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ₹10 ಕೋಟಿ ಅನುದಾನ ದುರುಪಯೋಗವಾಗಿದೆ ಎಂಬ ಆರೋಪದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೀಠದ ಉಚ್ಛಾಟಿತ ಆಡಳಿತಾಧಿಕಾರಿ ಡಾ. ರಾಜ್‌ಕುಮಾರ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನುದಾನ ದುರುಪಯೋಗದ ಆರೋಪದ ಕುರಿತು ರಾಜ್ಯಪಾಲರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ರಾಜ್ಯಪಾಲರು ಮತ್ತು ಮುಖ್ಯ ಕಾರ್ಯದರ್ಶಿಗಳ ಸೂಚನೆಯಂತೆ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿದ್ದು, ಲೋಕೋಪಯೋಗಿ ಇಲಾಖೆ ಮತ್ತು ಕೆಆರ್‌ಐಡಿಎಲ್‌ನ ಕಾರ್ಯಪಾಲಕ ಅಭಿಯಂತರರು ತನಿಖೆಗೆ ಆಗಮಿಸಿದ್ದರು. ಆದರೆ, ಯಾವುದೇ ಪೂರ್ವ ನೋಟಿಸ್ ನೀಡದೆ ತನಿಖೆಗೆ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ ಎಂದರು.

ದೂರುದಾರರು ಹಾಗೂ ಆರೋಪ ಎದುರಿಸುತ್ತಿರುವವರಿಗೆ ನೋಟಿಸ್ ನೀಡಿ, ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ತನಿಖೆ ನಡೆಸಬೇಕು. ಪ್ರಕರಣವನ್ನು ಕಾಟಾಚಾರಕ್ಕೆ ತನಿಖೆ ನಡೆಸಿ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನವಿದ್ದು, ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

2021ರಲ್ಲಿ ಕೇವಲ 45 ದಿನಗಳಲ್ಲಿ ಹಂತ ಹಂತವಾಗಿ ₹10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ನಿಯಮದ ಪ್ರಕಾರ ಮೊದಲ ಹಂತದಲ್ಲಿ ಶೇ. 25, ಎರಡನೇ ಹಂತದಲ್ಲಿ ಶೇ. 50 ಹಾಗೂ ಅಂತಿಮ ಹಂತದಲ್ಲಿ ಶೇ. 25ರಷ್ಟು ಹಣ ಬಿಡುಗಡೆ ಮಾಡಬೇಕಿತ್ತು. ಆದರೆ, ನಿಯಮ ಉಲ್ಲಂಘಿಸಿ ಅಂದಿನ ಅಧಿಕಾರಿಗಳೊಂದಿಗೆ ಶಾಮೀಲಾಗಿ ಅನುದಾನ ಪಡೆಯಲಾಗಿದೆ ಎಂದು ಆರೋಪಿಸಿದರು.

ಈಗಾಗಲೇ ಇದ್ದ ಕಟ್ಟಡವನ್ನೇ ಹೊಸದಾಗಿ ನಿರ್ಮಿಸಲಾಗಿದೆ ಎಂದು ತೋರಿಸಿ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬುದು ಮತ್ತೊಂದು ಆರೋಪವಾಗಿದೆ. 2016-17ರಿಂದ ಲೆಕ್ಕಪತ್ರಗಳು, ಆದಾಯ ತೆರಿಗೆ ದಾಖಲೆಗಳು, ಗೂಗಲ್ ಮ್ಯಾಪ್ ಚಿತ್ರಗಳು ಹಾಗೂ 2018ರಲ್ಲಿ ವಚನಾನಂದ ಸ್ವಾಮೀಜಿ ಅವರ ಪಟ್ಟಾಭಿಷೇಕದ ಸಂದರ್ಭದ ವೀಡಿಯೊ, ಫೋಟೋಗಳು ಕಟ್ಟಡದ ಅಸ್ತಿತ್ವವನ್ನು ದೃಢಪಡಿಸುತ್ತವೆ ಎಂದರು.

ಕಟ್ಟಡದ ಅಳತೆ, ಸ್ಟ್ರಕ್ಚರಲ್ ಡಿಸೈನ್ ಹಾಗೂ ಕಬ್ಬಿಣದ ಬಳಕೆಯ ಲೆಕ್ಕಾಚಾರದಲ್ಲಿ ವ್ಯತ್ಯಾಸಗಳಿವೆ. 127 ಟನ್ ಕಬ್ಬಿಣ ಸಾಕಾಗುವ ಕಾಮಗಾರಿಗೆ 350 ಟನ್‌ಗೂ ಅಧಿಕ ಕಬ್ಬಿಣ ಬಳಸಲಾಗಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿದೆ ಎಂದು ದೂರಿದರು.

ಅನುದಾನ ಬಿಡುಗಡೆಗೆ ಸಂಬಂಧಿಸಿದ ಥರ್ಡ್ ಪಾರ್ಟಿ ಪರಿಶೀಲನೆ, ಮೆಜರ್‌ಮೆಂಟ್ ಬುಕ್ (ಎಂಬಿ) ಹಾಗೂ 4ಜಿ ವಿನಾಯಿತಿ ನಿಯಮಗಳ ಪಾಲನೆಯ ಬಗ್ಗೆಯೂ ತನಿಖೆಯಾಗಬೇಕು. ಹಣಕಾಸಿನ ಅಧಿಕಾರ ಹಸ್ತಾಂತರದ ನಿರ್ಣಯದಲ್ಲಿ ನಕಲಿ ಸಹಿ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಫೌಂಡರ್ ಟ್ರಸ್ಟಿ ಹೊನ್ನಾಳಿ ಬಾಬಣ್ಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.