SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ಅವಸರಕ್ಕೆ ಬಿದ್ದು ಬಿತ್ತನೆ ಮಾಡಿ ನಷ್ಟ ಅನುಭವಿಸಬೇಡಿ: ರಘುಮೂರ್ತಿ

ಅವಸರಕ್ಕೆ ಬಿದ್ದು ಬಿತ್ತನೆ ಮಾಡಿ ನಷ್ಟ ಅನುಭವಿಸಬೇಡಿ: ರಘುಮೂರ್ತಿ

0
76

ಚಿತ್ರದುರ್ಗ: ಚಳ್ಳಕೆರೆ ತಾಲೂಕು ಹಾಗೂ ಜಿಲ್ಲೆಯಾದ್ಯಂತ ಮಳೆ ಕೊರತೆಯಿಂದಾಗಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಿತ್ತನೆ ಕಾರ್ಯ ತೀವ್ರ ಕುಂಠಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಬೆಳೆ ವಿಮೆ ಮಾಡಿಸಿ, ಮಳೆಯಿಲ್ಲದೆ ಬಿತ್ತನೆ ಮಾಡಲಾಗದ ರೈತರಿಗೆ ʻಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆʼಯಡಿ ಶೇ. 25ರಷ್ಟು ವಿಮಾ ಪರಿಹಾರ ಒದಗಿಸಲಾಗುವುದು ಎಂದು ಸಚಿವ ಟಿ. ರಘುಮೂರ್ತಿ ಭರವಸೆ ನೀಡಿದ್ದಾರೆ.

ಬುಧವಾರದಿಂದಲೇ ತಮ್ಮ ಕ್ಷೇತ್ರ ಹಾಗೂ ನೆರೆಯ ತಾಲೂಕುಗಳಲ್ಲಿ ಬರಪರಿಸ್ಥಿತಿ ಅಧ್ಯಯನ ನಡೆಸುತ್ತಿರುವ ಅವರು, ಗುರುವಾರ ಚಳ್ಳಕೆರೆ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಖುದ್ದಾಗಿ ಬೆಳೆ ಹಾನಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಗಡಿಯಿಂದ ಪ್ರವಾಸ ಆರಂಭಿಸಿದ ಸಚಿವರು, ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಬರದಿಂದಾಗಿ ಹಾನಿಗೊಳಗಾಗಿರುವ ತೊಗರಿ ಹಾಗೂ ಜೋಳದ ಬೆಳೆಗಳನ್ನು ಪರಿಶೀಲಿಸಿದರು. ನಂತರ ಹುಲಿಕುಂಟೆ ಗ್ರಾಮಕ್ಕೆ ತೆರಳಿ ತೀವ್ರವಾಗಿ ಒಣಗುತ್ತಿರುವ ಅಡಿಕೆ ತೋಟಗಳನ್ನು ವೀಕ್ಷಿಸಿದರು. ಈ ವೇಳೆ ರೈತರೊಂದಿಗೆ ಸಂವಾದ ನಡೆಸಿ, ಬೆಳೆ ನಷ್ಟದಿಂದಾಗಿ ಅವರು ಎದುರಿಸುತ್ತಿರುವ ಸಂಕಷ್ಟ ಹಾಗೂ ಅಹವಾಲುಗಳನ್ನು ಆಲಿಸಿದರು.

ಕಾಪರಹಳ್ಳಿ ಗ್ರಾಮದಲ್ಲಿ ರೈತರು ಬೆಳೆದಿದ್ದ ನಾಲ್ಕು ವರ್ಷದ ಅಡಿಕೆ ತೋಟಗಳು ನೀರಿಲ್ಲದೆ ಸಂಪೂರ್ಣವಾಗಿ ಒಣಗಿಹೋಗಿವೆ. ಸಾಣಿಕೆರೆಯಲ್ಲಿ ನೀರು ಬತ್ತಿಹೋಗಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಆಶ್ರಯವಾಗಿದ್ದ ಕೊಳವೆಬಾವಿಗಳಲ್ಲೂ ಅಂತರ್ಜಲ ಕುಸಿದಿರುವುದರಿಂದ ಅಡಿಕೆ ಹಾಗೂ ತೆಂಗು ಬೆಳೆಗಳು ನಾಶವಾಗಿವೆ. ಇದರ ಜೊತೆಗೆ ಬೊಮ್ಮಸಮುದ್ರದ ರೈತ ಚೆಲುವೆಸ್ವಾಮಿ ಅವರ ಜಮೀನಿಗೂ ಭೇಟಿ ನೀಡಿದ ಸಚಿವರು, ಇತ್ತೀಚೆಗಷ್ಟೇ ಬಿತ್ತನೆಯಾಗಿದ್ದ ಶೇಂಗಾ, ತೊಗರಿ ಮತ್ತು ಜೋಳದ ಬೆಳೆಗಳನ್ನು ವೀಕ್ಷಿಸಿದರು. ಈ ಕುರಿತು ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಂದ ಮಾಹಿತಿ ಪಡೆದ ಸಚಿವರು, ನಿಯಮಾನುಸಾರ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಸ್ತುತ ಜಿಲ್ಲೆಯಲ್ಲಿ ಕೇವಲ ಶೇ. 17 ರಿಂದ 18ರಷ್ಟು ಮಾತ್ರ ಬಿತ್ತನೆಯಾಗಿದೆ. ಚಳ್ಳಕೆರೆ ತಾಲೂಕಿನಲ್ಲಿ ಇದು ಕೇವಲ ಶೇ. 16ರಷ್ಟಿದೆ. ಶೇ. 25ಕ್ಕಿಂತ ಕಡಿಮೆ ಬಿತ್ತನೆಯಾಗಿರುವುದರಿಂದ, ವಿಮೆ ನೋಂದಣಿ ಮಾಡಿಸಿದ ರೈತರಿಗೆ ಅನುಕೂಲವಾಗಲಿದೆ. ಮಳೆಯಿಲ್ಲದೆ ಬಿತ್ತನೆ ಮಾಡಲಾಗದ ರೈತರಿಗೂ ಹಾಗೂ ಬಿತ್ತನೆ ಮಾಡಿ ನಷ್ಟ ಅನುಭವಿಸಿದ ರೈತರಿಗೂ ಶೇ. 25ರಷ್ಟು ವಿಮಾ ಮೊತ್ತದ ಪರಿಹಾರ ಲಭ್ಯವಾಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ತಲಾ ಶೇ. 50ರಷ್ಟು ಅನುದಾನವನ್ನು ಈ ಯೋಜನೆಗೆ ಭರಿಸಲಿವೆ, ಎಂದು ಸಚಿವರು ವಿವರಿಸಿದರು.

ರೈತರಿಗೆ ಸಚಿವರ ಕಿವಿಮಾತು: ಒಂದೆರಡು ದಿನ ಮಳೆಯಾಯಿತು, ಮಣ್ಣು ಸ್ವಲ್ಪ ಹಸಿಯಾಗಿದೆ ಎಂದು ಅವಸರಕ್ಕೆ ಬಿದ್ದು ರೈತರು ಬಿತ್ತನೆಗೆ ಮುಂದಾಗಬಾರದು. ಬಿತ್ತನೆ ಬೀಜ, ರಸಗೊಬ್ಬರ ತಂದು ಸುಮ್ಮನೆ ಖರ್ಚು ಮಾಡಿ ನಷ್ಟ ಅನುಭವಿಸುವ ಬದಲು, ವಿಮಾ ಯೋಜನೆಯಡಿ ಸಿಗುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಚಿವರು ರೈತರಲ್ಲಿ ಮನವಿ ಮಾಡಿದರು.

ಅನ್ನದಾತರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯ. ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸಲು ಸರ್ಕಾರ ಬದ್ಧವಾಗಿದ್ದು, ಸದಾ ರೈತರ ಬೆನ್ನೆಲುಬಾಗಿ ನಿಲ್ಲಲಿದೆ. ಬರ ಪರಿಸ್ಥಿತಿ ನಿರ್ವಹಣೆ ಹಾಗೂ ಬೆಳೆ ನಷ್ಟದ ಕುರಿತು ಚಳ್ಳಕೆರೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಒ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ಕರೆಯಲಾಗಿದ್ದು, ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗುವುದು ಎಂದು ಸಚಿವ ಟಿ. ರಘುಮೂರ್ತಿ ತಿಳಿಸಿದರು.