SK Home Ad
Home ನಮ್ಮ ಜಿಲ್ಲೆ ಚಿಕ್ಕಮಗಳೂರು ರಾಜ್ಯದಲ್ಲಿ ವಿದ್ಯುತ್ ಅಭಾವವಿಲ್ಲ : ಸಚಿವ ಕೆ.ಜೆ. ಜಾರ್ಜ್

ರಾಜ್ಯದಲ್ಲಿ ವಿದ್ಯುತ್ ಅಭಾವವಿಲ್ಲ : ಸಚಿವ ಕೆ.ಜೆ. ಜಾರ್ಜ್

0
32

ಚಿಕ್ಕಮಗಳೂರು: : ರಾಜ್ಯದಲ್ಲಿ ವಿದ್ಯುತ್ ಅಭಾವವಿಲ್ಲ, ಮೂಲಸೌಕರ್ಯ ಹಾಗೂ ಸರಬರಾಜು ಜಾಲವನ್ನು ಬಲಪಡಿಸಲು ಮುಂದಿನ ನಾಲ್ಕು ವರ್ಷಗಳಲ್ಲಿ ೪೦೦ ಹೊಸ ಸಬ್ಸ್ಟೇಷನ್ಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಜಿಲ್ಲೆಯ ಮೂಡಿಗೆರೆ ಪಟ್ಟಣದ ಅಡ್ಯಂತಯ್ಯ ರಂಗಮಂದಿರದಲ್ಲಿ ಶನಿವಾರ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ‘ಪ್ರಜಾಸೇವಾ ಆಂದೋಲನ’ ಸಭೆಯ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲದಿದ್ದರೂ, ಅದನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಮೂಲಸೌಕರ್ಯಗಳ ಕೊರತೆ ಇದೆ. ಇದನ್ನು ಸರಿಪಡಿಸಲು ಈಗಾಗಲೇ ೧೦೦ಕ್ಕೂ ಹೆಚ್ಚು ಸಬ್ಸ್ಟೇಷನ್‌ಗಳ ಕಾಮಗಾರಿ ನಡೆಸಲಾಗಿದ್ದು, ಒಟ್ಟು ೪೦೦ ಸಬ್ಸ್ಟೇಷನ್‌ಗಳನ್ನು ನಿರ್ಮಿಸಿ ಲೈನ್‌ಗಳನ್ನು ದೃಢೀಕರಿಸಲಾಗುವುದು ಎಂದರು.

ಇತ್ತೀಚೆಗೆ ಗಾಳಿಯ ಅಭಾವದಿಂದಾಗಿ ವಾಯು ವಿದ್ಯುತ್ ಉತ್ಪಾದನೆ ಕುಸಿದ ಪರಿಣಾಮ ಕೆಲವೇ ಗಂಟೆಗಳ ಕಾಲ ತಾತ್ಕಾಲಿಕ ತೊಂದರೆಯಾಗಿತ್ತು, ಅದನ್ನು ಈಗ ಸರಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ, ಸಾರ್ವಜನಿಕರ ಕುಂದುಕೊರತೆ ಆಲಿಸಲು ಪ್ರತಿ ತಿಂಗಳ 2 ಹಾಗೂ 4ನೇ ಶನಿವಾರ ಪ್ರಜಾಸೇವಾ ಅಂದೋಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕೊಟ್ಟಿಗೆಹಾರ ಭಾಗದಲ್ಲಿ ಪ್ರವಾಸೋದ್ಯಮ ಇಲಾಖೆ ಕಟ್ಟಡ ಉದ್ಘಾಟನೆಯಾಗದಿರುವ ಕುರಿತು ವರದಿ ತರಿಸಿಕೊಂಡು ಪರಿಶೀಲಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಸಕಿ ನಯನಾ ಮೋಟಮ್ಮ, ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.