SK Home Ad
Home ನಮ್ಮ ಜಿಲ್ಲೆ ಚಿಕ್ಕಮಗಳೂರು ಮದುವೆಯ ಸಂಭ್ರಮದ ಬೆನ್ನಲ್ಲೇ ಸಾವಿನ ಅಟ್ಟಹಾಸ: ನವವಿವಾಹಿತನ ಬದುಕು ಭೀಕರ ಅಂತ್ಯ

ಮದುವೆಯ ಸಂಭ್ರಮದ ಬೆನ್ನಲ್ಲೇ ಸಾವಿನ ಅಟ್ಟಹಾಸ: ನವವಿವಾಹಿತನ ಬದುಕು ಭೀಕರ ಅಂತ್ಯ

0
124

ಚಿಕ್ಕಮಗಳೂರು: ಸರ್ಕಾರಿ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ, ಐದು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ನವವಿವಾಹಿತ ಬೈಕ್ ಸವಾರ ಮೃತಪಟ್ಟಿರುವ ದಾರುಣ ಘಟನೆ ಶೃಂಗೇರಿ ತಾಲೂಕಿನ ಮೆಣಸೆ ಸಮೀಪ ನಡೆದಿದೆ.

ಶೃಂಗೇರಿ ತಾಲೂಕಿನ ಕುಂಚೇಬೈಲು ನಿವಾಸಿ ನಾಗರಾಜ್ (32) ಮೃತಪಟ್ಟ ದುರ್ದೈವಿ. ಪೇಂಟಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ನಾಗರಾಜ್ ಅವರ ವಿವಾಹ ಐದು ದಿನಗಳ ಹಿಂದಷ್ಟೇ ನಡೆದಿತ್ತು ಎನ್ನಲಾಗಿದೆ. ನವಜೀವನ ಆರಂಭಿಸುವ ಮುನ್ನವೇ ಸಂಭವಿಸಿದ ಈ ದುರಂತ ಕುಟುಂಬಸ್ಥರು ಹಾಗೂ ಬಂಧುಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಜಯಪುರದಿಂದ ಶೃಂಗೇರಿಯತ್ತ ತೆರಳುತ್ತಿದ್ದ ಸರ್ಕಾರಿ ಬಸ್ ಹಾಗೂ ನಾಗರಾಜ್ ಅವರು ಚಲಾಯಿಸುತ್ತಿದ್ದ ಬೈಕ್ ನಡುವೆ ಮೆಣಸೆ ಸಮೀಪ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ಬೈಕ್ ಸವಾರನಿಗೂ ವ್ಯಾಪಿಸಿದೆ ಎನ್ನಲಾಗಿದೆ. ಪರಿಣಾಮ ನಾಗರಾಜ್ ಅವರು ಗಂಭೀರವಾಗಿ ಸುಟ್ಟು ಮೃತಪಟ್ಟಿದ್ದಾರೆ.

ಅಪಘಾತದ ಬಳಿಕ ಸರ್ಕಾರಿ ಬಸ್ ರಸ್ತೆ ಬದಿಯ ಕಂದಕಕ್ಕೆ ಇಳಿದಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.