ಚಿಕ್ಕಮಗಳೂರು: ಕಾಫಿನಾಡಿನ ಬಯಲುಸೀಮೆ ಭಾಗದಲ್ಲಿ ಬೆಳೆ ನಷ್ಟ ಹಾಗೂ ಸಾಲದ ಹೊರೆಯಿಂದ ರೈತರು ಎದುರಿಸುತ್ತಿರುವ ಸಂಕಷ್ಟದ ನಡುವೆ, ಅಜ್ಜಂಪುರ ತಾಲೂಕಿನಲ್ಲಿ 38 ವರ್ಷದ ರೈತರೊಬ್ಬರು ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಮೃತರನ್ನು ಅಜ್ಜಂಪುರ ತಾಲೂಕಿನ ಮಾಕನಹಳ್ಳಿ ಗ್ರಾಮದ ನಿವಾಸಿ ಸುನೀಲ್ (38) ಎಂದು ಗುರುತಿಸಲಾಗಿದೆ. ತಾಲೂಕಿನ ಹುಣಸಘಟ್ಟ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ.
ಸುನೀಲ್ ಅವರು ತಮ್ಮ ತೋಟದಲ್ಲಿ ಅಡಿಕೆ ಬೆಳೆ ಬೆಳೆಯಲು ವಿವಿಧ ಬ್ಯಾಂಕ್ಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಂದ ₹10 ಲಕ್ಷಕ್ಕೂ ಅಧಿಕ ಸಾಲ ಪಡೆದಿದ್ದರು ಎನ್ನಲಾಗಿದೆ. ಆದರೆ, ಈ ಬಾರಿ ಮಳೆಯ ಕೊರತೆಯಿಂದ ಅಡಿಕೆ ತೋಟದ ಬೆಳೆ ತೀವ್ರ ಹಾನಿಗೊಳಗಾಗಿದ್ದು, ತೋಟವನ್ನು ಉಳಿಸಿಕೊಳ್ಳಲು ಅವರು ಸಾಕಷ್ಟು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಮಳೆಯ ಅಭಾವದಿಂದ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಕೈಕೊಟ್ಟ ಪರಿಣಾಮ ಆದಾಯ ಕುಂಠಿತಗೊಂಡಿತ್ತು. ಮತ್ತೊಂದೆಡೆ, ಪಡೆದಿದ್ದ ಸಾಲವನ್ನು ಮರುಪಾವತಿಸುವ ಚಿಂತೆಯೂ ಅವರನ್ನು ಕಾಡುತ್ತಿತ್ತು ಎನ್ನಲಾಗಿದೆ. ಬೆಳೆ ನಷ್ಟ ಹಾಗೂ ಆರ್ಥಿಕ ಸಂಕಷ್ಟದಿಂದ ಅವರು ತೀವ್ರವಾಗಿ ನೊಂದಿದ್ದರು ಎಂದು ತಿಳಿದುಬಂದಿದೆ.
ಸಾಲದ ಹೊರೆ ಮತ್ತು ಬೆಳೆ ನಷ್ಟದ ಚಿಂತೆಯಿಂದ ಮನನೊಂದಿದ್ದ ಸುನೀಲ್, ಹುಣಸಘಟ್ಟ ಗ್ರಾಮದ ಬಳಿ ಹರಿಯುವ ಭದ್ರಾ ನಾಲೆಗೆ ಹಾರಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ ಅವರನ್ನು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಸುನೀಲ್ ಮೃತಪಟ್ಟಿದ್ದಾರೆ.
ಘಟನೆಯಿಂದ ಮಾಕನಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕೃಷಿ ವೆಚ್ಚ ಹೆಚ್ಚಳ, ಮಳೆಯ ಅನಿಶ್ಚಿತತೆ, ಬೆಳೆ ನಷ್ಟ ಹಾಗೂ ಸಾಲ ಮರುಪಾವತಿಯ ಒತ್ತಡದಿಂದ ರೈತರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಈ ಘಟನೆ ಮತ್ತೊಮ್ಮೆ ಗಮನ ಸೆಳೆದಿದೆ.
- ಒಪಿಎಸ್ ಮರುಜಾರಿಗೆ ಸರ್ಕಾರ ಬದ್ಧ: ಬಸವರಾಜ ಗುರಿಕಾರ
- ಆರ್ಥಿಕ ಸಂಕಷ್ಟ: ಭದ್ರಾ ನಾಲೆಗೆ ಹಾರಿದ ರೈತ ಚಿಕಿತ್ಸೆ ಫಲಿಸದೆ ಸಾವು
- ರೈಲು ಪ್ರಯಾಣಿಕರೇ ಗಮನಿಸಿ: ಸಹಪ್ರಯಾಣಿಕರಿಗೆ ಕಿರಿಕಿರಿ ಮಾಡಿದರೆ ಬೀಳಲಿದೆ ಭಾರಿ ದಂಡ!
- ಫ್ರಾನ್ಸ್ ಬಳಿಕ ಅಲ್ಬೇನಿಯಾದಲ್ಲೂ ಹಿಂಸಾತ್ಮಕ ಪ್ರತಿಭಟನೆ: ಪ್ರಧಾನಿ ರಾಜೀನಾಮೆಗೆ ಪಟ್ಟು
- ಹುಟ್ಟಿದ ಕೆಲವೇ ಕ್ಷಣಗಳಲ್ಲಿ ‘ರಾಜನಂತೆ’ ಮಲಗಿದ ಮಗುವಿನ ರಾಯಲ್ ಪೋಸ್ ವಿಡಿಯೋ ವೈರಲ್!






















