SK Home Ad
Home ನಮ್ಮ ಜಿಲ್ಲೆ ಚಿಕ್ಕಬಳ್ಳಾಪುರ ಮಾಜಿ ಸಿಎಂ ಸಿದ್ದು ಎದರು ಶಾಸಕ ಪ್ರದೀಪ್‌ ಈಶ್ವರ್‌ ಕಣ್ಣಿರು: ಚಪ್ಪಲಿ ಎಸೆತ ಪ್ರಕರಣ; ತನಿಖೆಗೆ...

ಮಾಜಿ ಸಿಎಂ ಸಿದ್ದು ಎದರು ಶಾಸಕ ಪ್ರದೀಪ್‌ ಈಶ್ವರ್‌ ಕಣ್ಣಿರು: ಚಪ್ಪಲಿ ಎಸೆತ ಪ್ರಕರಣ; ತನಿಖೆಗೆ ಆದೇಶ

0
178

ಚಪ್ಪಲಿ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ, ಮಾಜಿ ಸಿಎಂ ಎದುರು ಕಣ್ಣೀರು ಹಾಕಿದ ಘಟನೆ ನಡೆದಿದೆ. ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ತಮಗೆ ಮತ್ತು ತಮ್ಮ ಕುಟುಂಬಕ್ಕೆ ನಿಂದಿಸಿ, ಚಪ್ಪಲಿ ಎಸೆದಿರುವ ಕುರಿತು ಪ್ರದೀಪ್ ಈಶ್ವರ್ ಭಾವುಕರಾಗಿ ವಿವರಿಸಿದ್ದಾರೆ. ಈ ವೇಳೆ ಶಾಸಕರಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ, “ರಾಜಕಾರಣದಲ್ಲಿ ಇಂತಹ ಘಟನೆಗಳು ಸಾಮಾನ್ಯ, ಧೃತಿಗೆಡದೆ ಎದುರಿಸಬೇಕು, ನಾವು ನಿಮ್ಮೊಂದಿಗಿದ್ದೇವೆ” ಎಂದು ಸಾಂತ್ವನ ಹೇಳಿದ್ದಾರೆ.

ನಂತರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಸಿದ್ದರಾಮಯ್ಯ, ಗೃಹ ಸಚಿವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಆಡಳಿತ ಪಕ್ಷದ ಶಾಸಕರ ಮೇಲೆ ಇಂತಹ ದಾಳಿ ನಡೆದಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ಪ್ರಿಯಾಂಕ್ ಖರ್ಗೆಗೆ ಸೂಚಿಸಿದ್ದಾರೆ. ಹಾಗೇ ಕರ್ತವ್ಯ ಲೋಪ ಎಸಗಿದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಮತ್ತೊಂದೆಡೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಎಕ್ಸ್’ (ಟ್ವಿಟರ್) ಮೂಲಕ ವಿರೋಧ ಪಕ್ಷಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. “ಸಾರ್ವಜನಿಕವಾಗಿ ಸೋತಾಗ ಸಭ್ಯತೆಯೂ ಸತ್ತುಹೋಗುತ್ತದೆ. ಯುವ ನಾಯಕನ ಜನಪ್ರಿಯತೆ ಜೀರ್ಣಿಸಿಕೊಳ್ಳಲಾಗದೆ ನಡೆಸಿರುವ ಈ ನೀಚ ಕೃತ್ಯವು ವಿಪಕ್ಷಗಳ ಹತಾಶೆ ಹಾಗೂ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಇಂತಹ ಹಿಂಸಾತ್ಮಕ ದಾಳಿಗಳಿಂದ ನಮ್ಮ ನಾಯಕರು ಧೃತಿಗೆಡುವುದಿಲ್ಲ, ಬದಲಾಗಿ ಹೋರಾಟದ ಹಾದಿ ಮತ್ತಷ್ಟು ಗಟ್ಟಿಯಾಗುತ್ತದೆ” ಎಂದು ಕಿಡಿಕಾರಿದ್ದಾರೆ.

“ಇದು ಬಸವಣ್ಣ, ಕುವೆಂಪು ಅಂತಹ ಶಾಂತಿಪ್ರಿಯ ಕರ್ನಾಟಕ. ಇಲ್ಲಿ ಇಂತಹ ವಿಕೃತ, ಹಿಂಸಾತ್ಮಕ ಪುಂಡಾಟಿಕೆಗಳಿಗೆ ಜಾಗವಿಲ್ಲ. ಸಾರ್ವಜನಿಕ ಸಭ್ಯತೆಯ ಗಡಿ ದಾಟಿದ ಪ್ರತಿಯೊಬ್ಬರ ವಿರುದ್ಧವೂ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲಿದೆ,” ಎಂದು ಡಿ.ಕೆ. ಶಿವಕುಮಾರ್ ಎಚ್ಚರಿಸಿದ್ದಾರೆ.