ಬೆಂಗಳೂರು: “ಕರ್ನಾಟಕ ಜೈನ ಧರ್ಮದ ಕರ್ಮಭೂಮಿ. ಕರ್ನಾಟಕವನ್ನು ಆಳಿದ ಹೊಯ್ಸಳ, ರಾಷ್ಟ್ರಕೂಟರು, ಕನ್ನಡದ ಆದಿಕವಿ ಪಂಪ ಕೂಡ ಜೈನ ಸಮುದಾಯದವರು” ಎಂದು ಸಿಎಂ ಡಿ.ಕೆ. ಶಿವಕುಮಾರ್ ಬಣ್ಣಿಸಿದರು.
ಶ್ರೀ ಜ್ಞಾನೋದಯ ದಿಗಂಬರ ಜೈನ ಮಂದಿರ ವತಿಯಿಂದ ವೈಟ್ ಫೀಲ್ಡ್‌ನ ತೂಬರಹಳ್ಳಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕ್ಷಮಾವಾಣಿ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ನಾವು ನೀವೆಲ್ಲರೂ ಧರ್ಮ ಗುರುಗಳ ಸಮ್ಮುಖದಲ್ಲಿ ಅವರ ಆಶೀರ್ವಚನ ಕೇಳುತ್ತಿರುವುದು ನಮ್ಮ ಭಾಗ್ಯ. ಪ್ರಪಂಚಕ್ಕೆ ಅಹಿಂಸೆ ಮಹತ್ವ ಸಾರಿದ ಭಗವಾನ್ ಮಹಾವೀರರಿಗೆ ನಮಿಸುತ್ತೇನೆ. ತನ್ನನ್ನು ತಾನು ಜಯಿಸುವವನೇ ನಿಜವಾದ ಜಯಶಾಲಿ ಎಂದು ಮಾರ್ಗದರ್ಶನ ನೀಡಿದ್ದಾರೆ” ಎಂದರು.
“ಅಹಿಂಸೆ ಸರ್ವೋಚ್ಚ ಧರ್ಮ, ಸತ್ಯ ಶಾಶ್ವತ ಎಂದು ಭಗವಾನ್ ಮಹಾವೀರರು ನಮಗೆ ಸಂದೇಶ ನೀಡಿದ್ದಾರೆ. ಸುಳ್ಳು ಸದ್ಯಕ್ಕೆ ಗೆಲ್ಲಬಹುದು, ಅಂತಿಮವಾಗಿ ಗೆಲ್ಲುವುದು ಸತ್ಯ. ಸುಳ್ಳಿಗೆ ದೀರ್ಘಾವಧಿ ಜೀವ ಇರುವುದಿಲ್ಲ ಎಂದು ಹೇಳಿದ್ದಾರೆ.
ಶ್ರವಣಬೆಳಗೊಳ ಜೈನ ಧರ್ಮದ ಕಾಶಿ: “ಕರ್ನಾಟಕದ ಶ್ರವಣಬೆಳಗೊಳ ಜೈನ ಧರ್ಮದ ಕಾಶಿ ಇದ್ದಂತೆ. ನಮ್ಮ ರಾಜ್ಯದಲ್ಲಿ ನೂರಾರು ಜೈನ ತೀರ್ಥಂಕರ ದೇವಾಲಯಗಳು ಇವೆ ಎಂಬುದನ್ನು ಇತಿಹಾಸ ಹೇಳುತ್ತದೆ. ಕರ್ನಾಟಕದ ಮುಖ್ಯಮಂತ್ರಿಯಾಗಿ, ಪ್ರಜಾ ಸೇವಕನಾಗಿ ಜೈನ್ ಬಾಂಧವರ ಜತೆ ಇದ್ದೇನೆ ಎಂದು ಹೇಳಲು ಬಂದಿದ್ದೇನೆ. ನಿಮ್ಮ ಕಷ್ಟ, ಸುಖ, ಶ್ರಮ ಏನೇ ಇರಲಿ. ನಮ್ಮ ಸರ್ಕಾರ ನಿಮ್ಮ ಜತೆಗಿದೆ” ಎಂದು ಭರವಸೆ ನೀಡಿದರು.
ಕ್ಷಮೆಯಿಂದ ಮನಸ್ಸು ಶುದ್ಧ: “ಮಹಾರಾಜರು ಆಶೀರ್ವಾದ ಮಾಡುವಾಗ ಮನಸ್ಸುಪೂರ್ತಿಯಾಗಿ ಆಶೀರ್ವಾದ ಮಾಡಿದ್ದು, ಅವರಿಗೆ ತಲೆಬಾಗಿ ನಮಿಸುವೆ. ಕ್ಷಮೆಯಿಂದ ಮನಸ್ಸು ಶುದ್ಧ, ಶಾಂತಿಯಿಂದ ಬದುಕು ಪಾವನವಾಗುತ್ತದೆ. ಧರ್ಮದ ಬೇರು ಗಟ್ಟಿಯಾಗಿ, ಸಮಾಜದ ಮೌಲ್ಯಗಳು ಮತ್ತಷ್ಟು ಬಲವಾಗಬೇಕು. ನಾಡಿದ್ದರೆ ನುಡಿ, ನುಡಿ ಇದ್ದರೆ ನಡೆ. ನಡೆ ಹಾಗೂ ನುಡಿ ಒಂದಾಗಲಿ. ನಮ್ಮ ಗುರುಗಳಿಂದ ನಾವು ಬಂಧುಗಳಾಗಿದ್ದು, ಗುರುಗಳಿಂದ ದೈವವನ್ನು ಕಾಣುತ್ತೇವೆ. ಗುರುಗಳಿಂದ ಮುಕ್ತಿ ಸಿಗುತ್ತದೆ ಎಂದು ಸೇರಿದ್ದೇವೆ. ಗುರು ಎಂದರೆ ಜ್ಞಾನ ನೀಡುವವರು ಮಾತ್ರವಲ್ಲ, ಬದುಕಿನ ದಾರಿ ತೋರುವವರು” ಎಂದು ಅಭಿಪ್ರಾಯಪಟ್ಟರು.





















