SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಪಾಠ ಮಾಡುತ್ತಿರುವಾಗಲೇ ಮಕ್ಕಳ ಮೇಲೆ ಬಿತ್ತು ಸರಕಾರಿ ಶಾಲೆಯ ಮೇಲ್ಛಾವಣಿ! ಐವರಿಗೆ ಗಾಯ

ಪಾಠ ಮಾಡುತ್ತಿರುವಾಗಲೇ ಮಕ್ಕಳ ಮೇಲೆ ಬಿತ್ತು ಸರಕಾರಿ ಶಾಲೆಯ ಮೇಲ್ಛಾವಣಿ! ಐವರಿಗೆ ಗಾಯ

0
94

ಬಾಗಲಕೋಟೆ: ತಾಲೂಕಿನ ಮುಗಳ್ಳೊಳ್ಳಿ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಗತಿಗಳು ನಡೆಯುತ್ತಿರುವಾಗಲೇ ಮೇಲ್ಛಾವಣಿಯ ಮೇಲ್ಪದರು ಬಿದ್ದು ಐವರು ಮಕ್ಕಳು ಗಾಯಗೊಂಡಿರುವ ಘಟನೆ ನಡೆದಿದೆ.

ಪ್ರೇಮ್, ರಾಕೇಶ, ಮಹೇಶ, ಸುನೀತಾ, ಸತೀಶ ಗಾಯಗೊಂಡಿರುವ ವಿದ್ಯಾರ್ಥಿಗಳು. ಮುಗಳ್ಳೊಳ್ಳಿಯಲ್ಲಿರುವ ಈ ಶಾಲೆಯಲ್ಲಿ 1 ರಿಂದ 6ನೇ ತರಗತಿವರೆಗೆ ಮಕ್ಕಳಿಗೆ ಪಾಠ ಮಾಡಲಾಗುತ್ತಿದ್ದು, 5 ಮತ್ತು 6ನೇ ತರಗತಿಯ ವಿದ್ಯಾರ್ಥಿಗಳಿದ್ದ ಕೊಠಡಿಯಲ್ಲಿ ಘಟನೆ ಸಂಭವಿಸಿದೆ.

ಪ್ರೇಮ್‌ಗೆ ತಲೆಗೆ ಬಲವಾಗಿ ಪೆಟ್ಟಾಗಿದ್ದು, ರಾಕೇಶನ ಕಾಲಿಗೆ, ಮಹೇಶ, ಸುನೀತಾ ಹಾಗೂ ಸತೀಶ ಅವರ ಕೈಗಳಿಗೆ ಪೆಟ್ಟಾಗಿದೆ. ಮೇಲ್ಚಾವಣಿಯ ಕಬ್ಬಿಣದ ಸರಕುಗಳು ಕಾಣಿಸುವಷ್ಟು ಬೋಳಾಗಿ ಸಿಮೆಂಟ್‌, ಕಲ್ಲಿನ ಮೇಲ್ಮುದ್ದೆ ಬಿದ್ದಿದ್ದು, ಅದರ ರಭಸಕ್ಕೆ ಮಕ್ಕಳು ಕೂರುವ ಮೇಜುಗಳು ಸಹ ಮಣಿದಿವೆ.

ಘಟನೆಯಿಂದಾಗಿ ವಿದ್ಯಾರ್ಥಿಗಳು ತೀವ್ರವಾಗಿ ಆತಂಕಗೊಂಡಿದ್ದು, ಪಾಲಕರು ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಲಾ ಸಿಬ್ಬಂದಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಅವರ ವಾಹನದಲ್ಲೇ ಮಕ್ಕಳನ್ನು ನವನಗರದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ತರಗತಿಯಲ್ಲಿ 5ನೇ ತರಗತಿಯ 14 ಹಾಗೂ 6ನೇ ತರಗತಿಯ 12 ಸೇರಿ ಒಟ್ಟು 26 ವಿದ್ಯಾರ್ಥಿಗಳು ಇದ್ದರು. ಅದೃಷ್ಟವಶಾತ್ ಗಾಯಗೊಂಡಿದ್ದ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.