Home Advertisement
Home ನಮ್ಮ ಜಿಲ್ಲೆ ಬೆಳಗಾವಿ ಶಾಸಕ ಸವದಿ ಕಣ್ಣೆದುರಲ್ಲೇ ಆಪ್ತ ಬೆಂಬಲಿಗ ಹೃದಯಾಘಾತದಿಂದ ಸಾವು

ಶಾಸಕ ಸವದಿ ಕಣ್ಣೆದುರಲ್ಲೇ ಆಪ್ತ ಬೆಂಬಲಿಗ ಹೃದಯಾಘಾತದಿಂದ ಸಾವು

0
135

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ನಡೆದ ಗೃಹಪ್ರವೇಶ ಸಮಾರಂಭವೇ ಕ್ಷಣಾರ್ಧದಲ್ಲಿ ಶೋಕಸಾಗರವಾಗಿದೆಯೆಂಬ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಲಕ್ಷ್ಮಣ ಸವದಿ ಅವರ ಆಪ್ತ ಬೆಂಬಲಿಗ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾವಸಾಬ್ ಬೇವನೂರ್ (65) ಅವರು ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಗಿದ್ದಾರೆ.

ಕಾರ್ಯಕ್ರಮದ ನಡುವೆ ದುರಂತ: ತಾಂವಶಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಕ್ಷ್ಮಣ ಸವದಿ ಅವರು ಭೇಟಿ ನೀಡಿದ್ದರು. ಇದೇ ವೇಳೆ ಅವರೊಂದಿಗೆ ಬಂದಿದ್ದ ರಾವಸಾಬ್ ಬೇವನೂರ್ ಅವರಿಗೆ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡಿತು. ನೋಡನೋಡುತ್ತಿದ್ದಂತೆಯೇ ಅವರು ಅಸ್ವಸ್ಥರಾಗಿ ನೆಲಕ್ಕುರುಳಿದರು.

ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ವಿಫಲ : ಸ್ಥಳದಲ್ಲಿದ್ದವರು ತಕ್ಷಣವೇ ನೆರವು ನೀಡಿದರೆ, ಶಾಸಕ ಲಕ್ಷ್ಮಣ ಸವದಿ ಅವರು ಸ್ವತಃ ಮುತುವರ್ಜಿ ವಹಿಸಿ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ, ಮಾರ್ಗಮಧ್ಯೆಯೇ ರಾವಸಾಬ್ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.

ಸಮಾಜಸೇವಕನ ಅಗಲಿಕೆ : ರಾವಸಾಬ್ ಬೇವನೂರ್ ಅವರು ಅಥಣಿ ತಾಲೂಕಿನಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಹಾಲುಮತ ಸಮಾಜದ ತಾಲೂಕು ಅಧ್ಯಕ್ಷರಾಗಿ ಸಮಾಜದ ಅಭಿವೃದ್ಧಿಗಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಅವರ ಅಗಲಿಕೆಯಿಂದ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಶೋಕದ ಛಾಯೆ ಆವರಿಸಿದೆ.

ಸಂತೋಷದಿಂದ ಸಾಗುತ್ತಿದ್ದ ಗೃಹಪ್ರವೇಶ ಕಾರ್ಯಕ್ರಮ ಕ್ಷಣಾರ್ಧದಲ್ಲಿ ದುಃಖದ ಮನೆಯಾಗಿದ್ದು, ತಾಂವಶಿ ಗ್ರಾಮದಲ್ಲೇ ಶೋಕದ ವಾತಾವರಣ ನಿರ್ಮಾಣವಾಗಿದೆ. ಮೃತರ ಕುಟುಂಬಸ್ಥರು ಹಾಗೂ ಬೆಂಬಲಿಗರ ಆಕ್ರಂದನ ಮುಗಿಲುಮುಟ್ಟಿದೆ.