Home Advertisement
Home ಸುದ್ದಿ ದೇಶ Paytm ಗ್ರಾಹಕರಿಗೆ ಗೊಂದಲ: ಯಾವ ಸೇವೆಗಳು ಮುಂದುವರಿಯುತ್ತವೆ?

Paytm ಗ್ರಾಹಕರಿಗೆ ಗೊಂದಲ: ಯಾವ ಸೇವೆಗಳು ಮುಂದುವರಿಯುತ್ತವೆ?

0
100

ನವದೆಹಲಿ: ನಿಯಮಗಳ ನಿರಂತರ ಉಲ್ಲಂಘನೆ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ಕ್ರಮ ಕೈಗೊಂಡಿದ್ದು, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ (PPBL) ಗೆ ನೀಡಿದ್ದ ಬ್ಯಾಂಕಿಂಗ್ ಪರವಾನಗಿಯನ್ನು ಏಪ್ರಿಲ್ 24ರಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ. ಈ ಕ್ರಮ ದೇಶದ ಫಿನ್‌ಟೆಕ್ ಕ್ಷೇತ್ರದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಆರ್‌ಬಿಐ ಕಠಿಣ ಕ್ರಮದ ಹಿನ್ನೆಲೆ: ಆರ್‌ಬಿಐ ನೀಡಿದ ಮಾಹಿತಿಯ ಪ್ರಕಾರ, ಪಿಪಿಬಿಎಲ್ ಪದೇ ಪದೇ ನಿಯಂತ್ರಣ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದು, ಬ್ಯಾಂಕಿನ ವ್ಯವಹಾರ ಮಾದರಿ ಠೇವಣಿದಾರರು ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಮೇಲೆ ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಸುಧಾರಣೆ ಕಾಣಿಸದ ಕಾರಣ ಅಂತಿಮವಾಗಿ ಪರವಾನಗಿ ರದ್ದು ಮಾಡುವ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.

ಮಾರ್ಚ್ 2022 ರ ಆದೇಶದ ಪ್ರಕಾರ, ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವುದನ್ನು ನಿಲ್ಲಿಸುವಂತೆ ಬ್ಯಾಂಕ್‌ಗೆ ನಿರ್ದೇಶನ ನೀಡಲಾಗಿದೆ, ನಂತರ 2024 ರ ಆರಂಭದಲ್ಲಿ ಹೆಚ್ಚುವರಿ ವ್ಯವಹಾರ ನಿರ್ಬಂಧಗಳನ್ನು ವಿಧಿಸಲಾಗಿದೆ, ಅಸ್ತಿತ್ವದಲ್ಲಿರುವ ಗ್ರಾಹಕ ಖಾತೆಗಳು ಮತ್ತು ಪ್ರಿಪೇಯ್ಡ್ ಸಾಧನಗಳಲ್ಲಿ ಯಾವುದೇ ಹೆಚ್ಚಿನ ಠೇವಣಿಗಳು, ಕ್ರೆಡಿಟ್‌ಗಳು ಮತ್ತು ಟಾಪ್-ಅಪ್‌ಗಳನ್ನು ಅನುಮತಿಸಲಾಗುವುದಿಲ್ಲ ಎಂದು ಆರ್‌ಬಿಐ ತಿಳಿಸಿದೆ.

ಪೇಟಿಎಂ ಸ್ಪಷ್ಟನೆ – ಸೇವೆಗಳು ಮುಂದುವರಿಕೆ: ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೇಟಿಎಂ (Paytm), ಈ ಕ್ರಮವು ಕೇವಲ ಪಿಪಿಬಿಎಲ್‌(PPBL)ಗೆ ಮಾತ್ರ ಸಂಬಂಧಿಸಿದೆ ಎಂದು ಸ್ಪಷ್ಟಪಡಿಸಿದೆ. ಪೇಟಿಎಂ ಅಪ್ಲಿಕೇಶನ್, ಯುಪಿಐ, ಕ್ಯೂಆರ್ ಕೋಡ್, ಸೌಂಡ್‌ಬಾಕ್ಸ್, ಪೇಮೆಂಟ್ ಗೇಟ್‌ವೇ ಸೇರಿದಂತೆ ಎಲ್ಲಾ ಸೇವೆಗಳು ಯಾವುದೇ ಅಡಚಣೆ ಇಲ್ಲದೆ ಮುಂದುವರೆಯಲಿವೆ ಎಂದು ಕಂಪನಿ ತಿಳಿಸಿದೆ.

ಕಂಪನಿಯ ಹೇಳಿಕೆಯಲ್ಲಿ, ಪಿಪಿಬಿಎಲ್ ಸ್ವತಂತ್ರ ಘಟಕವಾಗಿದ್ದು, One 97 Communications Limited ಜೊತೆ ಯಾವುದೇ ನೇರ ಆರ್ಥಿಕ ಅಥವಾ ಕಾರ್ಯಾಚರಣಾ ಸಂಬಂಧ ಇಲ್ಲ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಈ ನಿಯಂತ್ರಕ ಕ್ರಮವು ಪೇಟಿಎಂನ ಒಟ್ಟು ವ್ಯವಹಾರಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ವಿಶ್ವಾಸವನ್ನು ಗ್ರಾಹಕರಿಗೆ ನೀಡಲಾಗಿದೆ.

ಗ್ರಾಹಕರಲ್ಲಿ ಗೊಂದಲ – ಸ್ಪಷ್ಟನೆ ಅಗತ್ಯ : ಆರ್‌ಬಿಐ ಕ್ರಮದ ಬಳಿಕ ಪೇಟಿಎಂ ಬಳಕೆದಾರರಲ್ಲಿ ಗೊಂದಲ ಉಂಟಾಗಿದ್ದರೂ, ತಜ್ಞರು ಹೇಳುವಂತೆ ಪೇಟಿಎಂ ಆಪ್ ಅಥವಾ ಯುಪಿಐ ಸೇವೆಗಳನ್ನು ಬಳಸುವವರಿಗೆ ತಕ್ಷಣದ ಪರಿಣಾಮ ಇರುವ ಸಾಧ್ಯತೆ ಕಡಿಮೆ. ಆದರೆ ಪಿಪಿಬಿಎಲ್ ಖಾತೆ ಹೊಂದಿರುವ ಗ್ರಾಹಕರು ಮುಂದಿನ ಮಾರ್ಗಸೂಚಿಗಳಿಗಾಗಿ ಅಧಿಕೃತ ಸೂಚನೆಗಳನ್ನು ಗಮನಿಸುವುದು ಅಗತ್ಯವಾಗಿದೆ.

ಫಿನ್‌ಟೆಕ್ ಕ್ಷೇತ್ರಕ್ಕೆ ಸಂದೇಶ : ಈ ಕ್ರಮವು ಭಾರತದ ಡಿಜಿಟಲ್ ಬ್ಯಾಂಕಿಂಗ್ ಹಾಗೂ ಫಿನ್‌ಟೆಕ್ ಸಂಸ್ಥೆಗಳಿಗೆ ಕಠಿಣ ನಿಯಂತ್ರಣ ಸಂದೇಶ ನೀಡಿದಂತೆ ಆಗಿದೆ. ನಿಯಮ ಪಾಲನೆಗೆ ಯಾವುದೇ ತೊಡಕು ತಾಳುವುದಿಲ್ಲ ಎಂಬುದನ್ನು Reserve Bank of India ಮತ್ತೊಮ್ಮೆ ಸ್ಪಷ್ಟಪಡಿಸಿದೆ.