SK Home Ad
Home ನಮ್ಮ ಜಿಲ್ಲೆ ಗದಗ ಬರ ನಿರ್ವಹಣೆಯಲ್ಲಿ ಸರ್ಕಾರ ಸ್ಪಂದಿಸದಿದ್ದರೆ ಉಗ್ರ ಹೋರಾಟ

ಬರ ನಿರ್ವಹಣೆಯಲ್ಲಿ ಸರ್ಕಾರ ಸ್ಪಂದಿಸದಿದ್ದರೆ ಉಗ್ರ ಹೋರಾಟ

0
44

​ಗದಗ: ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ ನಗರದ ಹಿರೆಹಂದಿಗೋಳ ರಸ್ತೆಯ ಗಂಗಿಮಡಿಯಲ್ಲಿ ರೈತರ ಹೊಲಗಳಿಗೆ ತೆರಳಿ ಬರ ವೀಕ್ಷಣೆ ಮಾಡಿ ನಂತರ ​ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಾರಂಭದಲ್ಲಿ ಮಳೆ ಬಂದಿದ್ದರಿಂದ ರೈತರು ಆಶಾಭಾವನೆಯಿಂದ ಬಿತ್ತನೆ ಕಾರ್ಯ ಮಾಡಿದ್ದರು. ಆದರೆ ಜುಲೈ ತಿಂಗಳಲ್ಲಿ ಮಳೆ ಸಂಪೂರ್ಣವಾಗಿ ಇಲ್ಲದ ಕಾರಣ ಬೆಳೆಗಳು ಒಣಗುತ್ತಿವೆ. ಅನೇಕ ಕಡೆ ರೈತರು ಬಿತ್ತನೆಯನ್ನೇ ಮಾಡಿಲ್ಲ, ಬಿತ್ತನೆ ಮಾಡಿದವರ ಬೆಳೆಗಳು ಕೂಡ ಸಂಪೂರ್ಣ ಹಾಳಾಗಿವೆ. ಹೊಲಗಳಲ್ಲಿ ಎಲೆಗಳು ಹಳದಿಯಾಗುತ್ತಿದ್ದು, ಹೆಸರಿನ ಬೆಳೆ ಸಂಪೂರ್ಣ ವಿಫಲವಾಗಿದೆ,” ಎಂದು ಕಳವಳ ವ್ಯಕ್ತಪಡಿಸಿದರು.

​ಸರ್ಕಾರದಿಂದ ಯಾವುದೇ ಸಮೀಕ್ಷೆಯಾಗಿಲ್ಲ: ರಾಜ್ಯದಲ್ಲಿ ಒಂದೊಂದು ಕಿಲೋಮೀಟರ್‌ಗೆ ಒಂದೊಂದು ರೀತಿಯ ಪರಿಸ್ಥಿತಿ ಇದೆ. ಹೀಗಿದ್ದರೂ ಸರ್ಕಾರ ಇದುವರೆಗೆ ಯಾವುದೇ ಪ್ರಾಥಮಿಕ ಸಮೀಕ್ಷೆ ಅಥವಾ ʻಐ ಕಾಂಟ್ಯಾಕ್ಟ್ʼ ಸಮೀಕ್ಷೆಯನ್ನು ಮಾಡಿಲ್ಲ. ಕಂದಾಯ ಸಚಿವರು ಡಿಸಿಗಳಿಂದ ವರದಿ ತರಿಸುವುದಾಗಿ ಹೇಳುತ್ತಿದ್ದಾರೆ. ಆದರೆ ವೈಜ್ಞಾನಿಕವಾಗಿ ಕಂದಾಯ, ಸಾಂಖ್ಯಿಕ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ನೀಡಿದಾಗ ಮಾತ್ರ ಅದು ಅಧಿಕೃತವಾಗುತ್ತದೆ. ಎನ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ ಪರಿಹಾರ ಪಡೆದುಕೊಳ್ಳಲು ಸರ್ಕಾರ ಯಾವುದೇ ಎಸ್‌ಒಪಿ (SOP) ಸಿದ್ಧಪಡಿಸಿಲ್ಲ ಎಂದು ಅವರು ಟೀಕಿಸಿದರು.

​ಕೈಕೊಟ್ಟ ಏತ ನೀರಾವರಿ ಯೋಜನೆಗಳು: ಬರ ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ತುರ್ತು ಯೋಜನೆ ರೂಪಿಸಿಲ್ಲ. ಕುಡಿಯುವ ನೀರಿಗೂ ಪರ್ಯಾಯ ವ್ಯವಸ್ಥೆ ಮಾಡಲಾಗಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಮಳೆಯಾಗಿದ್ದರಿಂದ ನದಿಗಳಲ್ಲಿ ನೀರು ಬಂದಿದ್ದರೂ, ಆ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಸುಮಾರು 145 ಏತ ನೀರಾವರಿ ಯೋಜನೆಗಳು ದುರಸ್ತಿ ಮತ್ತು ವಿದ್ಯುತ್ ಬಿಲ್ ಪಾವತಿಸದ ಕಾರಣ ಸ್ಥಗಿತಗೊಂಡಿವೆ ಎಂದು ಅವರು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಿದರು.
​ಪ್ರಸ್ತುತ ಸರ್ಕಾರಕ್ಕೆ ರೈತರ ಬಗ್ಗೆ ತೀವ್ರ ನಿರ್ಲಕ್ಷ್ಯ ಭಾವನೆ ಇದೆ. ರೈತರು ಅತ್ಯಂತ ಸಂಕಷ್ಟದಲ್ಲಿದ್ದರೂ ಸರ್ಕಾರ ಮೂಕಪ್ರೇಕ್ಷಕನಂತೆ ವರ್ತಿಸುತ್ತಿದೆ ಎಂದು ಬೊಮ್ಮಾಯಿ ಅವರು ತರಾಟೆಗೆ ತೆಗೆದುಕೊಂಡರು.

ಕೇವಲ ಪತ್ರ ವ್ಯವಹಾರ ನಡೆಸುವುದೇ ಸರ್ಕಾರದ ಕೆಲಸವಲ್ಲ. ಕೂಡಲೇ ರಾಜ್ಯ ಸರ್ಕಾರ ವೈಜ್ಞಾನಿಕವಾಗಿ ಬೆಳೆ ಸಮೀಕ್ಷೆ ನಡೆಸಿ, ಅಧಿಕೃತ ವರದಿಯನ್ನು ಸಿದ್ಧಪಡಿಸಬೇಕು. ಅದರ ಆಧಾರದ ಮೇಲೆ ಎನ್‌ಡಿಆರ್‌ಎಫ್ (NDRF) ನಿಯಮಾವಳಿಗಳ ಪ್ರಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

​ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ಹಣವಿದೆ: ಬರ ಪರಿಹಾರ ಕಾರ್ಯಗಳಿಗೆ ಹಣದ ಕೊರತೆಯ ನೆಪ ಒಡ್ಡಲು ಸಾಧ್ಯವಿಲ್ಲ. ಸದ್ಯ ಪ್ರತಿಯೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳ ಪಿಡಿ (PD) ಖಾತೆಯಲ್ಲಿ ₹15 ರಿಂದ ₹20 ಕೋಟಿ ಹಣ ಲಭ್ಯವಿದೆ. ಈ ಹಣವನ್ನು ತುರ್ತಾಗಿ ಹೇಗೆ ಬಳಸಿಕೊಳ್ಳಬೇಕು ಎಂಬುದರ ಕುರಿತು ಸರ್ಕಾರ ಸೂಕ್ತ ಯೋಜನೆ ರೂಪಿಸಬೇಕು. ಮಲೆನಾಡು ಮತ್ತು ಕರಾವಳಿ ಭಾಗಗಳನ್ನು ಹೊರತುಪಡಿಸಿ, ಬಯಲುಸೀಮೆ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ ಎಂದು ಅವರು ತಿಳಿಸಿದರು.

​ರೈತರ ಆ್ಯಪ್ ಬಳಕೆಗೆ ಜಾಗೃತಿ ಅಗತ್ಯ:
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತರ ಆ್ಯಪ್ ಮೂಲಕ ರೈತರು ತಮ್ಮ ಜಮೀನಿನ ಸರ್ವೆ ನಂಬರ್ ಹಾಗೂ ಬೆಳೆ ಮಾಹಿತಿಗಳನ್ನು ಅಪ್‌ಲೋಡ್ ಮಾಡಬೇಕಾಗಿದೆ. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಿ ಮಾಹಿತಿ ಸಂಗ್ರಹಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಇದರ ಜೊತೆಗೆ ಕುಡಿಯುವ ನೀರು ಪೂರೈಕೆಗೆ ತುರ್ತು ಹಣ ಬಿಡುಗಡೆ ಮಾಡಬೇಕು ಹಾಗೂ ತುರ್ತು ಯೋಜನೆ ಮೂಲಕ ರೈತರಿಗೆ ಬೀಜ-ಗೊಬ್ಬರ ವಿತರಣೆಗೆ ನೆರವಾಗಬೇಕು ಎಂದು ಆಗ್ರಹಿಸಿದರು.

​ನಮ್ಮ ಸರ್ಕಾರ ದುಪ್ಪಟ್ಟು ಪರಿಹಾರ ನೀಡಿತ್ತು: ಹಿಂದೆ ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎನ್‌ಡಿಆರ್‌ಎಫ್ ನಿಯಮಾವಳಿಗಳಿಗಿಂತ ಎರಡು ಪಟ್ಟು ಹೆಚ್ಚಿನ ಪರಿಹಾರವನ್ನು ರೈತರಿಗೆ ನೀಡಲಾಗಿತ್ತು. ಒಣ ಬೇಸಾಯಕ್ಕೆ ₹6,800 ಬದಲಾಗಿ ₹13,600, ನೀರಾವರಿ ಬೆಳೆಗೆ ₹25,000 ಹಾಗೂ ತೋಟಗಾರಿಕಾ ಬೆಳೆಗಳಿಗೆ ₹28,000 ವರೆಗೆ ಪರಿಹಾರ ಒದಗಿಸಿದ್ದ ಉದಾಹರಣೆಗಳಿವೆ. ಆದರೆ ಪ್ರಸ್ತುತ ಸರ್ಕಾರ ಕೇವಲ ಮಂತ್ರಿಮಂಡಲದ ಕಸರತ್ತು ಮತ್ತು ರಾಜಕಾರಣದಲ್ಲೇ ಬ್ಯುಸಿಯಾಗಿದ್ದು, ರೈತರನ್ನು ದಿಕ್ಕು ತಪ್ಪಿಸುತ್ತಿದೆ ಎಂದು ದೂರಿದರು.

​ಹೋರಾಟದ ಎಚ್ಚರಿಕೆ: ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿದ ಬೊಮ್ಮಾಯಿ ಅವರು, ಇನ್ನು ಒಂದು ವಾರದಲ್ಲಿ ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ ವತಿಯಿಂದ ಗದಗ ಜಿಲ್ಲೆಯಾದ್ಯಂತ ನಾವೇ ಸ್ವತಃ ಬೆಳೆ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸುತ್ತೇವೆ. ಈ ವರದಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಒಂದು ವೇಳೆ ಸರ್ಕಾರ ರೈತರ ಹಿತ ಕಾಯಲು ವಿಫಲವಾದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.