KPSC scam: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಈಗ ಮಹತ್ವದ ಹಂತ ತಲುಪಿದ್ದು, ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಬೃಹತ್ ಆಸ್ತಿ ರಹಸ್ಯವೊಂದು ಬಟಾಬಯಲಾಗಿದೆ. ಅವರು ಕೆಪಿಎಸ್‌ಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರದ ಅವಧಿಯಲ್ಲಿ ಸುಮಾರು 100 ಎಕರೆಗೂ ಅಧಿಕ ಜಮೀನು ಖರೀದಿಸಿರುವುದು ಬೆಳಕಿಗೆ ಬಂದಿದೆ.
ಕಲಬುರಗಿ ಮೂಲದ ಶಿವಶಂಕರಪ್ಪ ಸಾಹುಕಾರ್ ಅವರು 2019 ರಿಂದ 2026ರ ಅವಧಿಯಲ್ಲಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಈ ದೊಡ್ಡ ಪ್ರಮಾಣದ ಭೂಮಿಯನ್ನು ಖರೀದಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೇವಲ ತಮ್ಮ ಹೆಸರಲ್ಲಷ್ಟೇ ಅಲ್ಲದೆ, ಪತ್ನಿ ವಿಜಯಲಕ್ಷ್ಮಿ ಸಾಹುಕಾರ್ ಹಾಗೂ ಪುತ್ರನ ಹೆಸರಿನಲ್ಲೂ ಜಮೀನುಗಳನ್ನು ನೋಂದಣಿ ಮಾಡಿಸಲಾಗಿದೆ. ಈ ಭೂಮಿ ಖರೀದಿಗಾಗಿ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆಸಿದ ಭ್ರಷ್ಟಾಚಾರದ ಹಣವನ್ನೇ ಬಳಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನೇಮಕಾತಿ ಹಗರಣದಲ್ಲಿ ಅಭ್ಯರ್ಥಿಗಳಿಂದ ಅಕ್ರಮವಾಗಿ ಸಂಗ್ರಹಿಸಿದ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಅಕ್ರಮ ಆಸ್ತಿಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಲಭ್ಯವಾಗಿದ್ದು, ಸಾಮಾಜಿಕ ಕಾರ್ಯಕರ್ತ ಶರಣ್ ಐಟಿ ಅವರು ಇವುಗಳನ್ನು ಸಿಐಡಿ (CID) ಅಧಿಕಾರಿಗಳಿಗೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಈಗಾಗಲೇ ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಸೇರಿದಂತೆ ಹಲವರು ಬಂಧನಕ್ಕೊಳಗಾಗಿದ್ದಾರೆ. ಈಗ ಮಾಜಿ ಅಧ್ಯಕ್ಷರ ಆಸ್ತಿ ಪಟ್ಟಿ ಹೊರಬಿದ್ದಿರುವುದು ಇಡೀ ಹಗರಣದ ಆಳ ಮತ್ತು ವ್ಯಾಪ್ತಿಯನ್ನು ಎತ್ತಿ ತೋರಿಸುತ್ತಿದೆ. ತನಿಖಾ ಸಂಸ್ಥೆಗಳು ಈ ಆಸ್ತಿಗಳ ಮೂಲವನ್ನು ಪತ್ತೆಹಚ್ಚಲು ಮುಂದಾಗಿದ್ದು, ಶಿವಶಂಕರಪ್ಪ ಸಾಹುಕಾರ್ ಅವರಿಗೆ ಕಾನೂನು ಸಂಕಷ್ಟ ಎದುರಾಗುವುದು ಖಚಿತವಾಗಿದೆ. ಈ ಬೆಳವಣಿಗೆಯು ರಾಜ್ಯ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.



















