ಕೊಪ್ಪಳ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ `ಬಳ್ಳಾರಿ ಚಲೋ’ ಪಾದಯಾತ್ರೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ರಾಯಚೂರು ಜಿಲ್ಲೆಗೆ ವಿದಾಯ ಹೇಳಿ ಕೊಪ್ಪಳ ಜಿಲ್ಲೆಗೆ ಭರ್ಜರಿ ಎಂಟ್ರಿ ಕೊಟ್ಟಿತು.
ಸಿಂಧನೂರಿನಿಂದ ಕಾರಟಗಿ ಕಡೆಗೆ ಸಾಗಿದ ಕೇಸರಿ ಪಡೆಯ ಹೆಜ್ಜೆಗಳಿಗೆ ಕಾರ್ಯಕರ್ತರ ಉತ್ಸಾಹ, ನಾಯಕರ ವಾಗ್ದಾಳಿ ಹಾಗೂ ಮಾರ್ಗಮಧ್ಯೆ ಸಿಕ್ಕ ಅದ್ದೂರಿ ಸ್ವಾಗತ ಮತ್ತಷ್ಟು ಕಳೆ ನೀಡಿತು. ನಾಲ್ಕನೇ ದಿನದ ಯಾತ್ರೆ ಸಿಂಧನೂರು ಕ್ಷೇತ್ರದಿಂದ ಹೊರಟು ಕನಕಗಿರಿ ಕ್ಷೇತ್ರದ ಕಾರಟಗಿ ತಾಲೂಕಿನತ್ತ ಮುನ್ನಡೆಯಿತು.
ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಗೋ ಪೂಜೆ ನೆರವೇರಿಸುವ ಮೂಲಕ ಸಿಂಧನೂರಿನ ಕೋರ್ಟ್ ಸರ್ಕಲ್‌ನಿಂದ ನಾಲ್ಕನೇ ದಿನದ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಗೋವಿಂದ ಕಾರಜೋಳ, ಶಾಸಕ ಸುನೀಲ್ ಕುಮಾರ್, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ಪ್ರಮುಖ ನಾಯಕರು ಹೆಜ್ಜೆ ಹಾಕಿದರು.
ಅಕ್ಕಮ್ಮದೇವಿ ಪ್ರತಿಮೆಗೆ ಮಾಲಾರ್ಪಣೆ: ಸಿಂಧನೂರಿನ ಗಂಗಾವತಿ ರಸ್ತೆಯಲ್ಲಿರುವ ಅಕ್ಕಮ್ಮದೇವಿ ಪ್ರತಿಮೆಗೆ ಬಿ.ವೈ. ವಿಜಯೇಂದ್ರ ಹಾಗೂ ಬಿಜೆಪಿ ನಾಯಕರು ಮಾಲಾರ್ಪಣೆ ಮಾಡಿದರು. ಬಳಿಕ ಪಾದಯಾತ್ರೆ ಮುಂದುವರಿಯಿತು. ಮಾರ್ಗದುದ್ದಕ್ಕೂ ಕಾರ್ಯಕರ್ತರು ಬಿಜೆಪಿ ಧ್ವಜ ಹಿಡಿದು ಘೋಷಣೆ ಕೂಗುತ್ತಾ ನಾಯಕರಿಗೆ ಸಾಥ್ ನೀಡಿದರು.
ಗೋರೆಬಾಳದಲ್ಲಿ ಈಶ್ವರನಿಗೆ ಪೂಜೆ: ಸಿಂಧನೂರು ತಾಲೂಕಿನ ಗೋರೆಬಾಳ ತಲುಪಿದ ಸಂದರ್ಭದಲ್ಲಿ ವಿಜಯೇಂದ್ರ ಅವರು ಶ್ರೀಕ್ಷೇತ್ರ ಗೋರೆಬಾಳದ ಈಶ್ವರ ಲಿಂಗಕ್ಕೆ ಮಾಲಾರ್ಪಣೆ ಮಾಡಿದರು. ಧಾರ್ಮಿಕ ಕಾರ್ಯಕ್ರಮಗಳ ನಡುವೆಯೇ ಪಾದಯಾತ್ರೆ ಮುಂದುವರಿಯಿತು. ಇಜೆ ಹೊಸಳ್ಳಿ, ಶ್ರೀಪುರಂ ಜಂಕ್ಷನ್, ಗೊರೇಬಾಳ ಕ್ಯಾಂಪ್, ಗೊರೇಬಾಳ ಸೇರಿ ಮಾರ್ಗ ಮಧ್ಯದ ಹಳ್ಳಿಗಳಲ್ಲಿ ಮಹಿಳೆಯರು ಪೂರ್ಣ ಕುಂಭ ಕಳಸ ಹಿಡಿದು ಸ್ವಾಗತಿಸಿಕೊಂಡರು.
ಅಲ್ಲಿಂದ ಹೊರಟ ಯಾತ್ರೆ ಸಿಂಧನೂರು ಕ್ಷೇತ್ರದ ಗ್ರಾಮೀಣ ಪ್ರದೇಶ, ಹಂಚಿನಾಳ ಕ್ಯಾಂಪ್‌ಗೆ ಮಧ್ಯಾಹ್ನ 2 ಗಂಟೆಗೆ ತಲುಪಿತು. ಊಟ ವಿಶ್ರಾಂತಿ ಬಳಿಕ ಸಂಜೆ 4 ಗಂಟೆಗೆ ಪುನರಾರಂಭಗೊಂಡ ಕೇಸರಿ ದಂಡಯಾತ್ರೆ, ಸಿಂಧನೂರಿನ ಗಡಿ ಗ್ರಾಮ ಚನ್ನಳ್ಳಿ ಕ್ರಾಸ್ ದಾಟಿ ಕೊಪ್ಪಳ ಜಿಲ್ಲೆ ಪ್ರವೇಶಿಸಿತು. ಕೊಪ್ಪಳ ಜಿಲ್ಲೆಗೆ ಪ್ರವೇಶಿಸುವ ಮಾರ್ಗವನ್ನು ಈ ದಿನದ ಪ್ರಮುಖ ಹಂತವಾಗಿ ಬಿಜೆಪಿ ಗುರುತಿಸಿತ್ತು.
ಜಾಲಿಹಾಳ ಕ್ಯಾಂಪ್‌ನಲ್ಲಿ ಹೂಮಳೆ, ಕ್ರೇನ್ ಹಾರ: ಕೊಪ್ಪಳ ಜಿಲ್ಲೆಯ ಗಡಿ ಪ್ರವೇಶಿಸಿದ ಬಳಿಕ ಜಾಲಿಹಾಳ ಕ್ಯಾಂಪ್ ಬಳಿ ವಿಜಯೇಂದ್ರ ಅವರಿಗೆ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದರು. ಕ್ರೇನ್ ಮೂಲಕ ಬೃಹತ್ ಹಾರ ಹಾಕಿ, ಹೂಗಳನ್ನು ಎರಚುವ ಮೂಲಕ ರಾಜ್ಯಾಧ್ಯಕ್ಷರನ್ನು ಬರಮಾಡಿಕೊಂಡರು. ಕೇಸರಿ ಧ್ವಜಗಳು ಹಾಗೂ ಕಾರ್ಯಕರ್ತರ ಘೋಷಣೆಗಳಿಂದ ಮಾರ್ಗದುದ್ದಕ್ಕೂ ರಾಜಕೀಯ ವಾತಾವರಣ ಕಾವೇರಿತ್ತು.
ಸಂಜೆ 6.30 ರ ಸುಮಾರಿಗೆ ಆಗಮಿಸಿದ ಕೇಸರಿ ದಂಡು ಕಾರಟಗಿ ಪಟ್ಟಣ ಪೂರ್ಣ ಕೇಸರಿಮಯಗೊಳಿಸಿತು. ಮಾಜಿ ಶಾಸಕ ಬಸವರಾಜ ದಢೇಸ್ಗೂರು ನೇತೃತ್ವದಲ್ಲಿ ಕಾರಟಗಿಯಲ್ಲಿ ಬಹಿರಂಗ ಸಮಾವೇಶ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದ ಜನಸ್ತೋಮದ ಕೇಸರಿ ಪಡೆಯ ಪಾದಯಾತ್ರೆ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಪಾದಯಾತ್ರೆಯಲ್ಲಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಕಳೆದ 25 ದಿನಗಳಲ್ಲಿ ಬಿಜೆಪಿಯ ನಿರಂತರ ಹೋರಾಟಕ್ಕೆ ನಾಲ್ಕು ಮಹತ್ವದ ಯಶಸ್ಸುಗಳು ಸಿಕ್ಕಿವೆ ಎಂದು ಪ್ರತಿಪಾದಿಸಿದರು.
ಈಗ ಕೊಪ್ಪಳದ ಸರದಿ: ಲಿಂಗಸುಗೂರಿನಿಂದ ಆರಂಭಗೊಂಡ ʻಬಳ್ಳಾರಿ ಚಲೋʼ ಪಾದಯಾತ್ರೆ ಮಸ್ಕಿ, ಸಿಂಧನೂರು ಭಾಗಗಳನ್ನು ದಾಟಿ ನಾಲ್ಕನೇ ದಿನ ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದತ್ತ ಕಾಲಿಟ್ಟಿದೆ. ಒಟ್ಟು ಸುಮಾರು 175- 185 ಕಿ.ಮೀ. ವ್ಯಾಪ್ತಿಯಲ್ಲಿ ಸಾಗಲಿರುವ ಪಾದಯಾತ್ರೆ ಮುಂದಿನ ದಿನಗಳಲ್ಲಿ ಕನಕಗಿರಿ, ಗಂಗಾವತಿ, ಕಂಪ್ಲಿ, ಸಂಡೂರು ಮಾರ್ಗವಾಗಿ ಬಳ್ಳಾರಿಯತ್ತ ಸಾಗಲಿದೆ.
ರಾಯಚೂರಿನಲ್ಲಿ ಮೂರು ದಿನಗಳ ಕಾಲ ಕಂಡ ಕೇಸರಿ ಶಕ್ತಿ ಇದೀಗ ಕೊಪ್ಪಳದ ನೆಲಕ್ಕೆ ಕಾಲಿಟ್ಟಿದ್ದು, ಕಾರಟಗಿ ಮೂಲಕ ʻಬಳ್ಳಾರಿ ಚಲೋʼ ಮತ್ತಷ್ಟು ರಾಜಕೀಯ ಕಾವು ಪಡೆದುಕೊಂಡಿದೆ.



















