
ಹಿಪ್ಪರಗಿ ಕಾರು ಸ್ಫೋಟ ಪ್ರಕರಣಕ್ಕೆ ಟ್ವಿಸ್ಟ್; ಬಡ್ಡಿ ವ್ಯವಹಾರದ ವೈಮನಸ್ಸು- ಕಾರಿನಡಿ ಜೆಲಿಟಿನ್ ಇಟ್ಟು ಸ್ಫೋಟ – ಹತ್ಯೆಗೆ ಸಂಚು ರೂಪಿಸಿದ್ದ ನಾಲ್ವರು ಅರೆಸ್ಟ್
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜುಲೈ 25ರಂದು ನಡೆದ ಕಾರು ಸ್ಫೋಟ ಪ್ರಕರಣವನ್ನು ಜಿಲ್ಲಾ ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಗಜಾನನನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಬಂಧಿತರನ್ನು ಶಿವಾನಂದ ಪರಸಪ್ಪ ಜಲ್ಲಿ, ರೇವಣನಿಂಗಪ್ಪ ಬಿದರಿ, ಮಹಾದೇವ ಸಂಗಾಪುರ ಹಾಗೂ ಮಲ್ಲಿಕಾರ್ಜುನ ಭದ್ರಣ್ಣವರ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಪ್ರಕರಣದ ಹಿಂದೆ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ ಹಣಕಾಸಿನ ವೈಮನಸ್ಸು ಇತ್ತು. ಕಾರಿನ ಮಾಲೀಕ ಹಾಗೂ ಹಿಪ್ಪರಗಿಯ ಯುವರಾಜ್ ವೈನ್ಸ್‌ನ ಲೀಸ್‌ದಾರರಾಗಿರುವ ಹಣಮಂತ ಅಥಣಿ ಮತ್ತು ಅವರ ಸಹೋದರ ಬಸವರಾಜ ಅಥಣಿ ಅವರು, ಪ್ರಮುಖ ಆರೋಪಿ ಶಿವಾನಂದ ಜಲ್ಲಿಯ ದೊಡ್ಡಪ್ಪ ನಿಂಗಪ್ಪ ಜಲ್ಲಿಗೆ ನಾಲ್ಕು ವರ್ಷಗಳ ಹಿಂದೆ ₹40 ಲಕ್ಷ ಸಾಲ ನೀಡಿದ್ದರು. ಬಡ್ಡಿ ಸೇರಿ ಸಾಲದ ಮೊತ್ತ ₹67 ಲಕ್ಷಕ್ಕೆ ಏರಿತ್ತು ಎನ್ನಲಾಗಿದೆ.
ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಹೆಬ್ಬಾಳಟ್ಟಿ ಗ್ರಾಮದ ಐದು ಎಕರೆ ಜಮೀನಿನ ಉತಾರದಲ್ಲಿ ಹಣಮಂತ ತಮ್ಮ ಹೆಸರನ್ನು ಸೇರಿಸಿಕೊಂಡಿದ್ದರು. ಈ ವಿಚಾರದಲ್ಲಿ ಎರಡೂ ಕುಟುಂಬಗಳ ನಡುವೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.
ಹಣಮಂತನನ್ನು ಹತ್ಯೆ ಮಾಡಿದರೆ ಸಾಲದ ಹಣವನ್ನು ಪಾವತಿಸುವುದರಿಂದ ತಪ್ಪಿಸಿಕೊಳ್ಳಬಹುದು ಎಂದು ಆರೋಪಿಗಳು ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅದರಂತೆ ಜುಲೈ 25ರಂದು ಕಾರಿನ ಕೆಳಗೆ ಜೆಲಿಟಿನ್ ಕಡ್ಡಿ ಇರಿಸಿ ಸ್ಫೋಟಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಮಾಹಿತಿ ನೀಡಿದ್ದಾರೆ.
ಕೃತ್ಯದಲ್ಲಿ ಪೊಲೀಸರಿಗೆ ಸುಳಿವು ಸಿಗದಂತೆ ಕದ್ದ ಸಿಮ್ ಕಾರ್ಡ್ ಹಾಗೂ ಸೆಕೆಂಡ್‌ಹ್ಯಾಂಡ್ ಮೊಬೈಲ್‌ಗಳನ್ನು ಬಳಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆಗಾಗಿ 25 ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿತ್ತು. ಆರೋಪಿಗಳ ಪತ್ತೆಯಲ್ಲಿ ತಂಡದ ಕಾರ್ಯವನ್ನು ಎಸ್‌ಪಿ ಸಿದ್ಧಾರ್ಥ ಗೋಯಲ್ ಶ್ಲಾಘಿಸಿದ್ದಾರೆ.
ಪರಾರಿಯಾಗಿರುವ ಮತ್ತೊಬ್ಬ ಆರೋಪಿ ಗಜಾನನನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.





















