Home Advertisement
Home ನಮ್ಮ ಜಿಲ್ಲೆ ಚಿಕ್ಕಮಗಳೂರು ಅಂಬೇಡ್ಕರ್ ಜಯಂತಿ ಮೆರವಣಿಗೆಯಲ್ಲಿ ಭೀಕರ ದುರಂತ: 7 ವರ್ಷದ ಬಾಲಕಿ ಸಾವು

ಅಂಬೇಡ್ಕರ್ ಜಯಂತಿ ಮೆರವಣಿಗೆಯಲ್ಲಿ ಭೀಕರ ದುರಂತ: 7 ವರ್ಷದ ಬಾಲಕಿ ಸಾವು

0
110

ಚಿಕ್ಕಮಗಳೂರು: ಅಂಬೇಡ್ಕರ್ ಜಯಂತಿ ಸಂಭ್ರಮದ ನಡುವೆ ದುರ್ಘಟನೆ ಸಂಭವಿಸಿ 7 ವರ್ಷದ ಬಾಲಕಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಿಳೆಕಲ್ಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಮೆರವಣಿಗೆ ನಡೆಯುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರೊಂದು ಜನರ ಗುಂಪಿನೊಳಗೆ ನುಗ್ಗಿ ಪಲ್ಟಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಕಾರಿನ ಭೀಕರ ಡಿಕ್ಕಿಗೆ ಸಾನ್ವಿ (7) ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆಕೆ ಇಂದಾವರ ಗ್ರಾಮದಿಂದ ಸಂಬಂಧಿಕರ ಮನೆಗೆ ಬಂದು ಮೆರವಣಿಗೆಯಲ್ಲಿ ಭಾಗಿಯಾಗಿದ್ದಳು ಎಂದು ತಿಳಿದುಬಂದಿದೆ.

ಗಾಯಾಳುಗಳ ಸ್ಥಿತಿ ಗಂಭೀರ : ಈ ಅಪಘಾತದಲ್ಲಿ ನಿಶ್ಚಿತ (11), ತೃಪ್ತಿ (11), ತಿಮ್ಮರಾಜು (45), ಉಷಾ (22), ಸೃಷ್ಟಿ (18), ನಾಗರಾಜು (28), ಚೇತನ್ (16) ಸೇರಿದಂತೆ ಒಟ್ಟು 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 8 ಮಂದಿಯನ್ನು ತುರ್ತು ಚಿಕಿತ್ಸೆಗೆ ಹಾಸನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನ ಚಾಲಕ ಸುಧಾಕರ್ ಕೂಡ ಗಂಭೀರ ಗಾಯಗೊಂಡಿದ್ದಾನೆ.

ಗ್ರಾಮಸ್ಥರ ಆಕ್ರೋಶ : ಘಟನೆಯ ನಂತರ ಆಕ್ರೋಶಗೊಂಡ ಗ್ರಾಮಸ್ಥರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಗಾಯಾಳು ಚಾಲಕನನ್ನು ಹಾಸನಕ್ಕೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್‌ನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ ಕಾರಣ ಆಸ್ಪತ್ರೆ ಆವರಣದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಪೊಲೀಸ್ ತನಿಖೆ : ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಪಘಾತದ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರೆದಿದೆ.