ಬಾಗಲಕೋಟೆ (ಕುಳಗೇರಿ ಕ್ರಾಸ್): ವಿದ್ಯುತ್ ಟಿಸಿ ತಂತಿ ತಗುಲಿ ರೈತರೊಬ್ಬರಿಗೆ ಸೇರಿದ ಸುಮಾರು 2.33 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆ ಸೋಮವಾರ ಮಧ್ಯಾಹ್ನ ಬೆಂಕಿಗೆ ಆಹುತಿಯಾಗಿದೆ. ನೀಲಗುಂದ ಗ್ರಾಮದ ರೈತ ಇಸ್ಮಾಯಿಲ್ಸಾಬ ಮಲ್ಲಣ್ಣವರ ಅವರಿಗೆ ಸೇರಿದ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಗ್ರಾಮದಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಜಮೀನಿನಲ್ಲಿ ಇಸ್ಮಾಯಿಲ್ಸಾಬ ಸಾಲಸೂಲ ಮಾಡಿ ಕಬ್ಬು ಬೆಳೆದಿದ್ದರು. ಇನ್ನೇನು 20 ದಿನಗಳಲ್ಲಿ ಕಬ್ಬು ಕಟಾವಿಗೆ ಬರುವ ಹಂತದಲ್ಲಿತ್ತು. ಅಷ್ಟರಲ್ಲೇ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿರುವ ಸುದ್ದಿ ತಿಳಿದ ರೈತ ಕುಟುಂಬ ಜಮೀನಿನತ್ತ ಧಾವಿಸಿದೆ. ಆದರೆ, ಅಷ್ಟರಲ್ಲಾಗಲೇ ಕಬ್ಬು ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.
ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ರೈತ ಕುಟುಂಬ ಕಣ್ಣೀರಿಡುವಂತಾಗಿದೆ. ಸಾಲ ಮಾಡಿ ಬೆಳೆದ ಕಬ್ಬು ಬೆಂಕಿಗೆ ಆಹುತಿಯಾಗಿರುವುದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸಕ್ಕರೆ ಕಾರ್ಖಾನೆಗಳೂ ಇನ್ನೂ ಆರಂಭವಾಗಿಲ್ಲ. ಸುಟ್ಟುಹೋದ ಕಬ್ಬನ್ನು ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕೆಇಬಿ ನಿರ್ಲಕ್ಷ್ಯದ ಆರೋಪ: ಈ ಭಾಗದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಹಲವು ರೈತರು ಉತ್ತಮ ಕಬ್ಬಿನ ಬೆಳೆ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಜೋತುಬಿದ್ದ ವಿದ್ಯುತ್ ತಂತಿಗಳನ್ನು ಸರಿಪಡಿಸಬೇಕು, ವಾಲಿರುವ ವಿದ್ಯುತ್ ಕಂಬಗಳನ್ನು ದುರಸ್ತಿಪಡಿಸಬೇಕು ಎಂದು ರೈತರು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ವಿದ್ಯುತ್ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೆ ಇಂತಹ ಅನಾಹುತಗಳನ್ನು ತಪ್ಪಿಸಬಹುದಿತ್ತು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಡವಾಗಿ ಬರುವ ಅಗ್ನಿಶಾಮಕ ದಳದ ವಿರುದ್ಧ ಅಸಮಾಧಾನ: ಕಬ್ಬು ಸಂಪೂರ್ಣ ಸುಟ್ಟುಹೋದ ಬಳಿಕ ಸ್ಥಳಕ್ಕೆ ಆಗಮಿಸುವ ಅಗ್ನಿಶಾಮಕ ದಳದಿಂದ ರೈತರಿಗೆ ಯಾವ ಪ್ರಯೋಜನವೂ ಆಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಈ ಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿದರೆ ಸುಮಾರು 25 ಕಿ.ಮೀ. ದೂರದಿಂದ ಅಗ್ನಿಶಾಮಕ ವಾಹನ ಬರಬೇಕಿದೆ. ವಾಹನ ಸ್ಥಳಕ್ಕೆ ತಲುಪುವಷ್ಟರಲ್ಲಿ ಬೆಳೆ ಸಂಪೂರ್ಣ ಭಸ್ಮವಾಗುವುದು ಸಾಮಾನ್ಯವಾಗಿದೆ ಎಂದು ಸ್ಥಳೀಯ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪುವ ವ್ಯವಸ್ಥೆ ಕಲ್ಪಿಸಬೇಕು. ಬೆಳೆ ನಾಶವಾದ ಬಳಿಕ ಬಂದು ಮಾಹಿತಿ ಸಂಗ್ರಹಿಸುವುದರಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಅವರು ಹೇಳಿದ್ದಾರೆ.
ಶಾಸಕರ ಸೂಚನೆಗೂ ಅಧಿಕಾರಿಗಳು ಡೋಂಟ್ಕೇರ್?: ವಾರದ ಹಿಂದೆ ಈ ಭಾಗದಲ್ಲಿ ಸುಮಾರು 20 ಎಕರೆ ಕಬ್ಬು ಬೆಂಕಿಗೆ ಆಹುತಿಯಾದ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸಿದ್ದರು. ಘಟನೆಯ ದಿನವೇ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ, ಇಂತಹ ಅವಘಡಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಆದರೆ, ಶಾಸಕರ ಸೂಚನೆಯ ಬಳಿಕವೂ ವಿದ್ಯುತ್ ಅವಘಡಗಳು ಮುಂದುವರಿದಿರುವುದು ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಪ್ರಶ್ನೆ ಮೂಡಿಸಿದೆ. ರೈತರ ಬೆಳೆಗಳಿಗೆ ರಕ್ಷಣೆ ಒದಗಿಸಲು ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.






















