SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌: 20 ಎಕರೆ ಕಬ್ಬು ಭಸ್ಮ, ಹೆದ್ದಾರಿ ತಡೆದು ರೈತರ ಆಕ್ರೋಶ

ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌: 20 ಎಕರೆ ಕಬ್ಬು ಭಸ್ಮ, ಹೆದ್ದಾರಿ ತಡೆದು ರೈತರ ಆಕ್ರೋಶ

0
55

ಬಾಗಲಕೋಟೆ(ಕುಳಗೇರಿ ಕ್ರಾಸ್): ಖಾನಾಪೂರ ಎಸ್.ಕೆ ಗ್ರಾಮದ ಸುಮಾರು 6 ಜನ ರೈತರಿಗೆ ಸೇರಿದ ಕಬ್ಬಿನ ಗದ್ದೆಗೆ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿ ಕಟಾವಿಗೆ ಬಂದಿದ್ದ 20 ಎಕರೆ ಕಬ್ಬು ಭಸ್ಮವಾದ ಘಟನೆ ನಡೆದಿದೆ.

ಖಾನಾಪೂರ ಎಸ್.ಕೆ ಗ್ರಾಮದ ರೈತರಾದ ಸಿದ್ದಪ್ಪ ಹಿರಗನ್ನವರ, ಯಲ್ಲಪ್ಪ ಹಿರಗನ್ನವರ, ಪ್ರಮೀಳಾ ಹಿರಗನ್ನವರ, ಹಣಮವ್ವ ಹಿರಗನ್ನವರ, ಹೆಬ್ಬಳೆಪ್ಪ ಮಾದರ, ದ್ಯಾಮವ್ವ ಮಾದರ ಅವರಿಗೆ ಸೇರಿದ ಸುಮಾರು 20 ಎಕರೆ ಕಬ್ಬು ಸುಟ್ಟು ಭಸ್ಮವಾಗಿದೆ.

ಇನ್ನೂರಕ್ಕೂ ಹೆಚ್ಚು ಯುವಕರು ರೈತರು ಸೇರಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು ಕಷ್ಟಸಾಧ್ಯವಾಯಿತು. ಬರಗಾಲದ ನಡುವೆಯೂ ಉತ್ತಮವಾಗಿ ಬೆಳೆದ ಕಬ್ಬು ಬೆಳೆ ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿದ್ದನ್ನ ಕಂಡು ರೈತರು ಕಣ್ಣೀರಿಟ್ಟರು.

ಬೆಂಕಿ ನಂದಿಸಲು ಎಷ್ಟೇ ಕರೆ ಮಾಡಿದರೂ ತಕ್ಷಣಕ್ಕೆ ಬಾರದ ಅಗ್ನಿಶಾಮಕದಳದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸದರು. ಎರಡು ಗಂಟೆಗಳ ಕಾಲ ದಿಢೀರ್ ರಾಷ್ಟ್ರೀಯ ಹೆದ್ದಾರಿ 218 ತಡೆದು ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸುಮಾರು ನಾಲ್ಕೈದು ಗಂಟೆ ಟ್ರಾಫಿಕ್ ಸಮಸ್ಯೆ ಉಂಟಾಗಿ ವಾಹನ ಚಾಲಕರು ಪ್ರಯಾಣಿಕರು ಪರದಾಡುವಂತಾಯಿತು.

ಶಾಸಕರ ಭೇಟಿ: ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಶಾಸಕ ಭೀಮಸೆನ ಚಿಮ್ಮನಕಟ್ಟಿ ಆಕ್ರೋಶಗೊಂಡ ರೈತರನ್ನ ಮನವೊಲಿಸಿ ಹೆದ್ದಾರಿಯಲ್ಲಿ ಮುಳ್ಳು ಕಂಠಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿದರು.

ನಂತರ ಕಬ್ಬು ಸುಟ್ಟ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು. ರೈತರಿಗೆ ಸಮಾಧಾನ ಹೇಳಿ ನಿರ್ಲಕ್ಷ್ಯ ತೋರಿದ ಕೆಇಬಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ರೈತರ ಜಮೀನುಗಳಲ್ಲಿ ವಿದ್ಯುತ್ ತಂತಿಗಳನ್ನ ಸರಿಪಡಿಸಿ ಟಿಸಿ ಇದ್ದಕಡೆ ಸ್ವಚ್ಛವಾಗಿಡುವಂತೆ ಕಟ್ಟುನಿಟ್ಟಾಗಿ ಹೇಳಿದರು. ಅನಾಹುತ ಆಗುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ರೈತರಿಗೆ ತಿಳಿ ಹೇಳಿದರು.

ಬೇಡಿಕೆ: ನಮ್ಮ ಗ್ರಾಮದಲ್ಲಿ ಬೆಂಕಿ ಹತ್ತಿದರೆ ನಂದಿಸಲು ಸುಮಾರು 25ಕಿಮೀ ದೂರಿದಿಂದ ಅಗ್ನಿಶಾಮಕ ದಳದವರು ಬರಬೇಕು. ಅವರು ಬರುವಷ್ಟರಲ್ಲಿ ಎಲ್ಲ ಬೆಳೆ ಸುಟ್ಟು ಭಸ್ಮವಾಗುತ್ತದೆ. ಕಾರಣ ನಮ್ಮೂರಿಗೆ ಅಗ್ನಿಶಾಮಕ ಕಚೇರಿ ತೆರೆಯುವಂತೆ ಮನವಿ ಮಾಡಿದರು. ಸ್ಪಂದಿಸಿದ ಶಾಸಕರು ಆದಷ್ಟು ಬೇಗ ಅಗ್ನಿಶಾಮಕ ನಿರ್ಮಿಸುವ ಭರವಸೆ ಕೊಟ್ಟರು.