Home Advertisement
Home ಸುದ್ದಿ ದೇಶ ಪಶ್ಚಿಮ ಬಂಗಾಳ: ಸುವೇಂದು ಅಧಿಕಾರಿ ಆಪ್ತ ಸಹಾಯಕನ ಭೀಕರ ಹತ್ಯೆ

ಪಶ್ಚಿಮ ಬಂಗಾಳ: ಸುವೇಂದು ಅಧಿಕಾರಿ ಆಪ್ತ ಸಹಾಯಕನ ಭೀಕರ ಹತ್ಯೆ

0
61

ಪಶ್ಚಿಮ ಬಂಗಾಳ: ವಿಧಾನಸಭಾ ಚುನಾವಣೆಯ ಬಳಿಕ ರಾಜಕೀಯ ಉದ್ವಿಗ್ನತೆ ತೀವ್ರಗೊಂಡಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ಭೀಕರ ಹತ್ಯೆ ಭಾರೀ ಸಂಚಲನ ಮೂಡಿಸಿದೆ. ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮ್ ಸಮೀಪದ ದೊಹರಿಯಾ ಪ್ರದೇಶದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಚಂದ್ರನಾಥ್ ಅವರ ಕಾರನ್ನು ಅಡ್ಡಗಟ್ಟಿ ಸಮೀಪದಿಂದ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡಿದ್ದ 41 ವರ್ಷದ ಚಂದ್ರನಾಥ್ ರಥ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಪಶ್ಚಿಮ ಬಂಗಾಳದ ಚುನಾವಣೋತ್ತರ ರಾಜಕೀಯ ಹಿಂಸಾಚಾರಕ್ಕೆ ಮತ್ತೊಂದು ಉದಾಹರಣೆಯಾಗಿ ಪರಿಣಮಿಸಿದೆ. ಬಿಜೆಪಿ ನಾಯಕರು ಇದನ್ನು “ಪೂರ್ವ ಯೋಜಿತ ರಾಜಕೀಯ ಹತ್ಯೆ” ಎಂದು ಆರೋಪಿಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಟೀಕಿಸಿದ್ದಾರೆ.

ಯಾರು ಈ ಚಂದ್ರನಾಥ್ ರಥ್? : ಮೂಲತಃ ಪೂರ್ವ ಮೇದಿನಿಪುರ ಜಿಲ್ಲೆಯ ಚಂಡಿಪುರ ನಿವಾಸಿಯಾಗಿದ್ದ ಚಂದ್ರನಾಥ್ ರಥ್, ರಾಮಕೃಷ್ಣ ಮಿಷನ್‌ನಲ್ಲಿ ಶಿಕ್ಷಣ ಪಡೆದು ಕೆಲಕಾಲ ಸ್ವಯಂಸೇವಕರಾಗಿಯೂ ಸೇವೆ ಸಲ್ಲಿಸಿದ್ದರು. ನಂತರ ಭಾರತೀಯ ವಾಯುಪಡೆಯಲ್ಲಿ ಸುಮಾರು 20 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದರು. ಬಳಿಕ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಕೆಲಸ ಮಾಡಿದ ಅವರು, ರಾಜಕೀಯ ತಂತ್ರಗಾರಿಕೆಯ ಮೂಲಕ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರ ಆಪ್ತ ವಲಯದಲ್ಲಿ ಪ್ರಮುಖ ಸ್ಥಾನ ಪಡೆದಿದ್ದರು.

ಚುನಾವಣೆ ಪ್ರಚಾರದ ವೇಳೆ ಸಭೆಗಳ ಆಯೋಜನೆ, ಕಾರ್ಯಕರ್ತರ ಸಂಯೋಜನೆ, ಹಣಕಾಸು ನಿರ್ವಹಣೆ ಮತ್ತು ರಾಜಕೀಯ ಸಂವಹನದಲ್ಲಿ ಚಂದ್ರನಾಥ್ ಪ್ರಮುಖ ಪಾತ್ರ ವಹಿಸಿದ್ದರು. ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಸಾಧಿಸಿದ ಐತಿಹಾಸಿಕ ಗೆಲುವಿನ ಹಿಂದೆ ಅವರ ಸಂಘಟನೆ ಕೌಶಲ್ಯವೂ ಕಾರಣ ಎಂದು ಪಕ್ಷದ ವಲಯಗಳು ಹೇಳುತ್ತಿವೆ.

“ಪೂರ್ವಯೋಜಿತ ಸಂಚು” ಎಂದ ಸುವೇಂದು ಅಧಿಕಾರಿ: ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸುವೇಂದು ಅಧಿಕಾರಿ, “ಇದು ಆಕಸ್ಮಿಕ ಘಟನೆ ಅಲ್ಲ. ಕಳೆದ ಎರಡು-ಮೂರು ದಿನಗಳಿಂದ ಹಂತಕರು ಚಂದ್ರನಾಥ್ ಅವರ ಚಲನವಲನವನ್ನು ಗಮನಿಸುತ್ತಿದ್ದರು. ಇದು ಸಂಪೂರ್ಣ ಪೂರ್ವಯೋಜಿತ ಕೊಲೆ” ಎಂದು ಆರೋಪಿಸಿದರು.

ಅವರು ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿ, “ರಾಜ್ಯದಲ್ಲಿ ಮಹಾಜಂಗಲ್ ರಾಜ್ ನಿರ್ಮಾಣವಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಂತಹ ಅಪರಾಧಿಗಳಿಗೆ ತಕ್ಕ ಶಿಕ್ಷೆ ನೀಡಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು. ಜೊತೆಗೆ ಬಿಜೆಪಿ ಕಾರ್ಯಕರ್ತರು ಶಾಂತಿ ಕಾಪಾಡಿಕೊಳ್ಳಬೇಕು ಮತ್ತು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಮನವಿ ಮಾಡಿದರು.

ರಾಜ್ಯ ರಾಜಕೀಯದಲ್ಲಿ ಹೆಚ್ಚಿದ ಉದ್ವಿಗ್ನತೆ : 294 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆಗೆ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಈ ಹತ್ಯೆ ನಡೆದಿದೆ. ತೃಣಮೂಲ ಕಾಂಗ್ರೆಸ್ 80 ಸ್ಥಾನಗಳಿಗೆ ಕುಸಿದಿದ್ದು, ಚುನಾವಣಾ ಅಕ್ರಮ ಆರೋಪಿಸಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಹತ್ಯೆ ಪ್ರಕರಣವು ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮತ್ತಷ್ಟು ಉದ್ವಿಗ್ನತೆ ಸೃಷ್ಟಿಸಿದ್ದು, ರಾಜ್ಯಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಘಟನಾ ಸ್ಥಳದಿಂದ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.