SK Home Ad
Home ನಮ್ಮ ಜಿಲ್ಲೆ ಧಾರವಾಡ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು

ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು

0
37

ಧಾರವಾಡ: ಕೆರೆಗೆ ಈಜಲು ಹೋಗಿದ್ದ ಮೂವರು ಅಪ್ರಾಪ್ತ ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಸಿಂಗನಳ್ಳಿ ಗ್ರಾಮದ ಸಮೀಪದ ಕರೆಮ್ಮನ ಕೆರೆಯಲ್ಲಿ ಶನಿವಾರ ಸಂಭವಿಸಿದೆ.

ಸಿಂಗನಳ್ಳಿ ಗ್ರಾಮದ ನಿವಾಸಿಗಳಾದ ಅನ್ವರ್ ಇಬ್ರಾಹಿಂ ವಟ್ನಾಳ (13), ಸುಭಾನಿ ಇಸಾಕ್ ಬಾಗಜಿಕೊಪ್ಪ (12) ಹಾಗೂ ಮೆಹಬೂಬ್ ಸುಭಾನಿ ದಾದಾಪೀರ್ ವಡ್ನಾಳ (15) ಮೃತಪಟ್ಟ ದುರ್ದೈವಿಗಳು ಎಂದು ಗೊತ್ತಾಗಿದೆ.

ಮೆಹಬೂಬ್ ವಟ್ನಾಳ ಹಾಗೂ ಅನ್ವರ್ ವಟ್ನಾಳ ಸೋದರರು. ಇವರಿಬ್ಬರೂ ಸಿಂಗನಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ. ಸುಭಾನಿ ಭಾಗಜಿಕೊಪ್ಪ ಬೈಲಹೊಂಗಲ ತಾಲೂಕಿನವನು. ಬೇಸಿಗೆ ರಜೆಗಾಗಿ ಸಂಬಂಧಿಕರ ಮನೆಗೆ ಬಂದಿದ್ದನು. ಬೇಸಿಗೆಯ ತಾಪ ಹೆಚ್ಚಾಗಿದ್ದರಿಂದ ಮೂವರೂ ಬಾಲಕರು ಮಧ್ಯಾಹ್ನದ ವೇಳೆ ಈಜಾಡಲು ಕರೆಮ್ಮನಕೆರೆಗೆ ತೆರಳಿದ್ದರು. ನೀರಿನ ಆಳ ತಿಳಿಯದೇ ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ಮೂವರೂ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಬಾಲಕರು ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ಪೋಷಕರು ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಗರಗ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಸ್ಥರ ನೆರವಿನಿಂದ ಶವಗಳನ್ನು ಹೊರತೆಗೆಯಲಾಗಿದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.