ಬೆಳಗಾವಿ: ಖಾನಾಪುರ ತಾಲೂಕಿನ ನಾಗರಗಾಳಿ-ತಾವರಗಟ್ಟಿ ರೈಲು ನಿಲ್ದಾಣಗಳ ನಡುವಿನ ದಟ್ಟ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಸಂಜೆ ರೈಲು ಹಳಿಯ ಮೇಲೆ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ಅಳ್ನಾವರ ಲೋಂಡಾ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಮಂಗಳವಾರ ಸಂಜೆ ಸುಮಾರು 5.30 ರ ವೇಳೆಗೆ ನಾಗರಗಾಳಿ ಭಾಗದಲ್ಲಿ ಮಿಂಚು ಗುಡುಗು ಸಹಿತ ಮಳೆ ಸುರಿಯಲಾರಂಭಿಸಿತು. ಇದೇ ವೇಳೆ ಬೀಸಿದ ಬಿರುಗಾಳಿಗೆ ಹಳಿ ಪಕ್ಕದಲ್ಲಿದ್ದ ಅರಣ್ಯ ಪ್ರದೇಶದ ಸುಮಾರು 30 ಅಡಿ ಎತ್ತರದ ಮರ ರೈಲು ಹಳಿಯ ಮೇಲೆ ಬಿದ್ದಿತು.
ಅದೇ ಸಮಯದಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೊಲ್ಲಾಪುರ ತಿರುಪತಿ ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲು, ಘಟನೆ ಸ್ಥಳದಿಂದ ಕೆಲವೇ ಅಡಿಗಳ ದೂರದಲ್ಲಿ ನಿಲ್ಲಿಸಲ್ಪಟ್ಟಿದ್ದು, ಸಂಭವನೀಯ ದೊಡ್ಡ ಅವಘಡ ತಪ್ಪಿದಂತಾಗಿದೆ. ರೈಲು ಸಿಬ್ಬಂದಿಯ ಎಚ್ಚರಿಕೆ ಹಾಗೂ ಸಮಯೋಚಿತ ಕ್ರಮದಿಂದ ಪ್ರಯಾಣಿಕರು ಆತಂಕದಿಂದ ಪಾರಾಗಿದ್ದಾರೆ.
ಘಟನೆ ಮಾಹಿತಿ ತಿಳಿಯುತ್ತಿದ್ದಂತೆಯೇ ನಾಗರಗಾಳಿ ಮತ್ತು ತಾವರಗಟ್ಟಿ ನಿಲ್ದಾಣಗಳ ರೈಲ್ವೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸಿದರು. ಸ್ಥಳೀಯರ ಸಹಾಯದಿಂದ ಮರದ ಮೇಲ್ಭಾಗವನ್ನು ಒಂದು ಹಳಿಯಿಂದ ತೆರವುಗೊಳಿಸಿ ಅಳ್ನಾವರ ಲೋಂಡಾ ಮಾರ್ಗದಲ್ಲಿ ರೈಲು ಸಂಚಾರಕ್ಕೆ ತಾತ್ಕಾಲಿಕ ಅವಕಾಶ ಕಲ್ಪಿಸಲಾಯಿತು.
ಲೋಂಡಾ ಅಳ್ನಾವರ ದಿಕ್ಕಿನ ಹಳಿಯ ಮೇಲೆ ಬಿದ್ದ ಮರವನ್ನು ಸಂಪೂರ್ಣ ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ. ಈ ಘಟನೆಯಿಂದ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳು ವಿಳಂಬಗೊಂಡಿವೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.






















