Home Advertisement
Home ನಮ್ಮ ಜಿಲ್ಲೆ ಧಾರವಾಡ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ: ಹುಬ್ಬಳ್ಳಿಯಲ್ಲಿ IPL ಫ್ಯಾನ್ ಪಾರ್ಕ್

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿಸುದ್ದಿ: ಹುಬ್ಬಳ್ಳಿಯಲ್ಲಿ IPL ಫ್ಯಾನ್ ಪಾರ್ಕ್

0
89
ಸಾಂದರ್ಭಿಕ ಚಿತ್ರ

ಆರ್‌ಸಿಬಿ–ಮುಂಬೈ ಪಂದ್ಯ ಸೇರಿ ಮೂರು ಪಂದ್ಯಗಳ ನೇರಪ್ರಸಾರ ಹುಬ್ಬಳ್ಳಿ ಫ್ಯಾನ್ ಪಾರ್ಕ್‌ನಲ್ಲಿ

ಹುಬ್ಬಳ್ಳಿ: ಇಂಡಿಯನ್ ಪ್ರೀಮಿಯರ್ ಲೀಗ್ ಕಾವು ದೇಶದಾದ್ಯಂತ ಏರಿಕೆಯಾಗುತ್ತಿರುವ ನಡುವೆ, ಕ್ರಿಕೆಟ್ ಅಭಿಮಾನಿಗಳಿಗೆ ಮೈದಾನದಲ್ಲೇ ಪಂದ್ಯ ವೀಕ್ಷಿಸುವ ಅನುಭವ ನೀಡುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ವಿಶೇಷ ‘ಐಪಿಎಲ್ ಫ್ಯಾನ್ ಪಾರ್ಕ್’ ಸ್ಥಾಪಿಸಲಾಗುತ್ತಿದೆ. ಇಂದು ಮತ್ತು ನಾಳೆ (ಮೇ 9 ಮತ್ತು 10 ರಂದು) ನಡೆಯಲಿರುವ ಐಪಿಎಲ್ ಪಂದ್ಯಗಳ ನೇರಪ್ರಸಾರವನ್ನು ಇಲ್ಲಿ ಬೃಹತ್ ಎಲ್‌ಇಡಿ ಪರದೆಯ ಮೇಲೆ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

ನಗರದ ಸಂತೋಷನಗರ (ಗೋಪನಕೊಪ್ಪ) ಭಾಗದಲ್ಲಿರುವ ಜೆ.ಕೆ. ಸ್ಕೂಲ್ ಸಮೀಪದ ಬಿಡಿಕೆ ಮೈದಾನದಲ್ಲಿ ಫ್ಯಾನ್ ಪಾರ್ಕ್ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿವೆ. ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಕುಟುಂಬ ಸಮೇತ ಭಾಗವಹಿಸುವ ನಿರೀಕ್ಷೆಯಿದೆ.

ಯಾವ ಪಂದ್ಯಗಳ ಪ್ರಸಾರ?: ಮೇ 9ರಂದು ಸಂಜೆ 7.30ಕ್ಕೆ ನಡೆಯಲಿರುವ ರಾಜಸ್ಥಾನ ರಾಯಲ್ಸ್ (RR) ಹಾಗೂ ಗುಜರಾತ್ ಟೈಟನ್ಸ್ (GT) ನಡುವಿನ ಪಂದ್ಯವನ್ನು ನೇರಪ್ರಸಾರ ಮಾಡಲಾಗುತ್ತದೆ.

ಮೇ 10ರಂದು ಮಧ್ಯಾಹ್ನ 3.30ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಲಕ್ಕೋ ಸೂಪರ್ ಜೈಂಟ್ಸ್ (LSG) ನಡುವಿನ ಪಂದ್ಯ, ಹಾಗೂ ಸಂಜೆ 7.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಮುಂಬೈ ಇಂಡಿಯನ್ಸ್ (MI) ನಡುವಿನ ಹೈವೋಲ್ಟೇಜ್ ಪಂದ್ಯಗಳನ್ನೂ ಅಭಿಮಾನಿಗಳು ಇಲ್ಲಿ ವೀಕ್ಷಿಸಬಹುದು.

ಬೃಹತ್ ಎಲ್‌ಇಡಿ ಪರದೆ : ಪಂದ್ಯಗಳ ವೀಕ್ಷಣೆಗೆ 32 ಅಡಿ ಅಗಲ ಮತ್ತು 18 ಅಡಿ ಎತ್ತರದ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗುತ್ತಿದೆ. ಅಭಿಮಾನಿಗಳು ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ನೋಡುತ್ತಿರುವಂತೆಯೇ ಅನುಭವ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ.

ಮೈದಾನದ ಅನುಭವವೇ ಫ್ಯಾನ್ ಪಾರ್ಕ್ ವಿಶೇಷತೆ: ಈ ಯೋಜನೆಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಯೋಜಿಸುತ್ತಿದ್ದು, ಐಪಿಎಲ್ ಪಂದ್ಯಗಳು ನಡೆಯದ ಪ್ರಮುಖ ನಗರಗಳಲ್ಲಿ ಫ್ಯಾನ್ ಪಾರ್ಕ್ ಸ್ಥಾಪಿಸುವ ಯೋಜನೆಯ ಭಾಗವಾಗಿ ಹುಬ್ಬಳ್ಳಿ ಆಯ್ಕೆಯಾಗಿದೆ.

ಫ್ಯಾನ್ ಪಾರ್ಕ್‌ನಲ್ಲಿ ಅಭಿಮಾನಿಗಳಿಗಾಗಿ ಕ್ರಿಕೆಟ್‌ ಜೊತೆಗೆ ಸಂಗೀತ, ಆಹಾರ ಮಳಿಗೆಗಳು, ಮಕ್ಕಳಿಗಾಗಿ ಪ್ರತ್ಯೇಕ ಆಟದ ವಲಯ, ಗೇಮ್ ಝೋನ್ ಹಾಗೂ ಮನರಂಜನಾ ಚಟುವಟಿಕೆಗಳನ್ನೂ ಏರ್ಪಡಿಸಲಾಗುತ್ತಿದೆ.

ಟಿಕೆಟ್ ಸಿಗದ ಅಭಿಮಾನಿಗಳಿಗೆ ಅವಕಾಶ: ಈ ಕುರಿತು ಮಾತನಾಡಿದ ಕೆಎಸ್‌ಸಿಎ ಧಾರವಾಡ ವಲಯದ ಅಧ್ಯಕ್ಷ ಅಲ್ತಾಫ್ ನವಾಜ್ ಕಿತ್ತೂರು , “ಐಪಿಎಲ್ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಮಾರಾಟವಾಗುತ್ತವೆ. ಎಲ್ಲರಿಗೂ ಮೈದಾನಕ್ಕೆ ಹೋಗಿ ಪಂದ್ಯ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಸ್ಟೇಡಿಯಂ ಅನುಭವ ನೀಡಲು ಫ್ಯಾನ್ ಪಾರ್ಕ್ ಪರಿಕಲ್ಪನೆ ರೂಪಿಸಲಾಗಿದೆ,” ಎಂದು ಹೇಳಿದರು.

ದೇಶದ 30 ನಗರಗಳಲ್ಲಿ ಫ್ಯಾನ್ ಪಾರ್ಕ್ : ಈ ಬಾರಿಯ ಐಪಿಎಲ್ ಟೂರ್ನಿ ಮಾರ್ಚ್ 28ರಂದು ಆರಂಭಗೊಂಡಿದ್ದು, ಮೇ 31ರವರೆಗೆ ನಡೆಯಲಿದೆ. ಇದರ ಭಾಗವಾಗಿ ದೇಶದ 30 ನಗರಗಳಲ್ಲಿ ಫ್ಯಾನ್ ಪಾರ್ಕ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಹುಬ್ಬಳ್ಳಿ ಜೊತೆಗೆ ಹಿಮಾಚಲ ಪ್ರದೇಶದ ಮಂಡಿ, ರಾಜಕೋಟ್, ಗ್ವಾಲಿಯರ್, ಪುದುಚೇರಿ ಹಾಗೂ ಅಸ್ಸಾಂನ ಗೋಲಘತ್ ನಗರಗಳಲ್ಲೂ ಇದೇ ದಿನಗಳಲ್ಲಿ ಫ್ಯಾನ್ ಪಾರ್ಕ್ ಆರಂಭಗೊಳ್ಳಲಿದೆ.

ಉಚಿತ ಪ್ರವೇಶ: ಫ್ಯಾನ್ ಪಾರ್ಕ್‌ಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಮಧ್ಯಾಹ್ನ ಪಂದ್ಯಗಳ ದಿನ 1.30ಕ್ಕೆ ಹಾಗೂ ಸಂಜೆ ಪಂದ್ಯಗಳ ದಿನ ಸಂಜೆ 4 ಗಂಟೆಗೆ ಗೇಟ್ ತೆರೆಯಲಾಗುತ್ತದೆ. ಮೊದಲು ಬರುವವರಿಗೆ ಆದ್ಯತೆ ಮೇರೆಗೆ ಪ್ರವೇಶ ಮತ್ತು ಸ್ಥಳ ಲಭ್ಯವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

2015ರಲ್ಲಿ ಆರಂಭವಾದ ಐಪಿಎಲ್ ಫ್ಯಾನ್ ಪಾರ್ಕ್ ಪರಿಕಲ್ಪನೆ ಈ ವರ್ಷ ಮತ್ತಷ್ಟು ವಿಸ್ತರಣೆ ಕಂಡಿದ್ದು, ದೇಶದ ವಿವಿಧ ಭಾಗಗಳಲ್ಲಿ ಕ್ರಿಕೆಟ್ ಸಂಭ್ರಮವನ್ನು ಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನವಾಗಿದೆ.