ಮೈಸೂರು: ಹಿರಿಯ ರಾಜಕಾರಣಿ, ರಾಜಕೀಯ ವಲಯದಲ್ಲಿ ಹಳ್ಳಿಹಕ್ಕಿ ಎಂದೇ ಗುರುತಿಸಿ ಕೊಂಡಿರುವ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಈ ಮೂಲಕ ಅವರು ಸಕ್ರಿಯ ರಾಜಕಾರಣದಲ್ಲಿ ಇರುತ್ತಾರೆ. ಇನ್ನು ಮುಂದೆ ತಾವಾಗಲಿ ಅಥವಾ ತಮ್ಮ ಕುಟುಂಬದವರು ಚುನಾವಣೆಗಳಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಂಬರುವ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಚುನಾವಣೆಗೆ ಸ್ಪರ್ಧಿಸಿದಾಗ ಜನರೇ ಹಣ ನೀಡಿ ಆಶೀರ್ವದಿಸಿದ್ದರು. ಈಗ ಹಣ ನೀಡಿ ಚುನಾವಣೆ ಎದುರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಎದುರಿಸಲು 50 ಕೋಟಿ ರೂ. ಬೇಕು. ಅಷ್ಟು ಖರ್ಚು ಮಾಡಿ ಚುನಾವಣೆ ಎದುರಿಸುವಷ್ಟು ಶಕ್ತಿ ನನಗಿಲ್ಲ ಎಂದಿದ್ದಾರೆ.
ನನ್ನ ಮಕ್ಕಳು ಕೂಡ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಅವರ ಶಕ್ತ್ಯಾನುಸಾರ ರಾಜಕೀಯದಲ್ಲಿ ಮುಂದುವರಿಯುತ್ತಾರೆ. ನಾನು ಸಹ ರಾಜಕೀಯದಲ್ಲಿ ಮುಂದುವರಿಯುತ್ತೇನೆ. ಆದರೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.























