ಲಖನೌ: ಮಿಚೆಲ್ ಮಾರ್ಷ್ ಸ್ಫೋಟಕ ಬ್ಯಾಟಿಂಗ್ ಬಲದಿಂದಾಗಿ ಲಖನೌ ಸೂಪರ್ ಜೈಂಟ್ಸ್ ತಂಡ ರಾಯಲ್ ಚಾಲೆಂಜರ್ಸ್ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್, ಬ್ಯಾಟ್ಸಮನ್‌ಗಳನ್ನು ಕಟ್ಟಿಹಾಕುವಲ್ಲಿ ವಿಫಲವಾಯಿತು.
ಲಖನೌ ಪರ ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದರು. ಕೇವಲ 56 ಎಸೆತದಲ್ಲಿ 9 ಬೌಂಡರಿ, 9 ಸಿಕ್ಸರ್‌ಗಳೊಂದಿಗೆ 111 ರನ್‌ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು.
ಮಿಚೆಲ್ ಮಾರ್ಷ್ ಜತೆಗೆ ಇನ್ನಿಂಗ್ಸ್ ಆರಂಭಿಸಿದ ಅರ್ಶಿನ್ ಕುಲಕರ್ಣಿ 95 ರನ್‌ಗಳ ಜತೆಯಾಟ ನಡೆಸಿದರೂ 17 ರನ್‌ಗಳ ಕಾಣಿಕೆ ನೀಡಿ ಔಟಾದರು.
ನಿಕೋಲಸ್ ಪೂರನ್ 23 ಎಸೆತದಲ್ಲಿ 4 ಬೌಂಡರಿ, 1 ಸಿಕ್ಸರ್‌ನಿಂದ 38 ರನ್ ಗಳಿಸಿ ಹೊರನಡೆದರು. ಬಳಿಕ ಬಂದ ನಾಯಕ ರಿಷಭ ಪಂತ್ ಕೇವಲ 10 ಎಸೆತದಲ್ಲಿ 4 ಬೌಂಡರಿ, 2 ಸಿಕ್ಸರ್‌ನಿಂದ 32 ರನ್ ಗಳಿಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.
ಅಂತಿಮವಾಗಿ ಲಖನೌ ಸೂಪರ್ ಜೈಂಟ್ಸ್ 19 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 209 ರನ್ ಗಳಿಸಿತು.
ವರುಣನ ಕಾಟ: 9 ಓವರ್‌ಗಳಲ್ಲಿ 95 ರನ್‌ಗಳಿಸಿ ಸುಸ್ಥಿತಿಯಲ್ಲಿದ್ದ ಲಖನೌ ರನ್ ಮಳೆ ಹರಿಸುತ್ತಿರುವಾಗಲೇ ಮಳೆರಾಯನ ಆರ್ಭಟ ಶುರುವಾಯಿತು. ಕೆಲ ಹೊತ್ತ ಪಂದ್ಯವನ್ನು ತಡೆಹಿಡಿಯಲಾಗಿತ್ತು. ಬಳಿಕ ಆರಂಭವಾಗಿ ಪಂದ್ಯದ 14ನೇ ಓವರ್‌ನ ಹೊತ್ತಿಗೆ ಮತ್ತೆ ಮಳೆ ಆರಂಭವಾಗಿದ್ದರಿಂದ 1 ಓವರ್ ಕಡಿತಗೊಳಿಸಿ ಪಂದ್ಯವನ್ನು 19 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು.























