Home Advertisement
Home ಸುದ್ದಿ Assam:  ಮೇ 12ರಂದು ಹೊಸ BJP ಸರ್ಕಾರ ಪ್ರಮಾಣ ವಚನ

Assam:  ಮೇ 12ರಂದು ಹೊಸ BJP ಸರ್ಕಾರ ಪ್ರಮಾಣ ವಚನ

0
75

ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರ ಸ್ವೀಕರಿಸಲು ಸಜ್ಜಾಗಿದೆ. ಮೇ 12ರಂದು ಬೆಳಿಗ್ಗೆ 11 ಗಂಟೆಗೆ ಗುವಾಹಟಿಯ ಖಾನಪರ ಪ್ರದೇಶದಲ್ಲಿ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಭಾರಿ ಸಿದ್ಧತೆಗಳು ಆರಂಭಗೊಂಡಿವೆ.

ಈ ಕುರಿತು ಮಾಹಿತಿ ನೀಡಿದ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಸೈಕಿಯಾ, “ಪ್ರಧಾನಿ ನರೇಂದ್ರ ಮೋಧಿ ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುತ್ತಾರೆ” ಎಂದು ತಿಳಿಸಿದ್ದಾರೆ.

ಲಕ್ಷಾಂತರ ಜನರ ಸಮ್ಮುಖದಲ್ಲಿ ಐತಿಹಾಸಿಕ ಕಾರ್ಯಕ್ರಮ: ಖಾನಪರದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಸಾಕ್ಷಿಯಾಗುವ ನಿರೀಕ್ಷೆಯಿದೆ. ಜನರು ಈ ಐತಿಹಾಸಿಕ ಕ್ಷಣದ ಭಾಗವಾಗಲು ಉತ್ಸುಕರಾಗಿದ್ದು, ಬೆಳಿಗ್ಗೆ 9 ಗಂಟೆಯೊಳಗೆ ಸಮಾರಂಭ ಸ್ಥಳಕ್ಕೆ ಆಗಮಿಸುವಂತೆ ಬಿಜೆಪಿ ಸಾರ್ವಜನಿಕರಿಗೆ ಮನವಿ ಮಾಡಿದೆ.

ರಾಜ್ಯದಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿರುವುದು ಪಕ್ಷಕ್ಕೆ ಮಹತ್ವದ ರಾಜಕೀಯ ಸಾಧನೆಯಾಗಿ ಪರಿಗಣಿಸಲಾಗಿದೆ. ಕಳೆದ ಎರಡು ಅವಧಿಗಳಲ್ಲಿ ಅಭಿವೃದ್ಧಿ, ಮೂಲಸೌಕರ್ಯ, ಭದ್ರತೆ ಹಾಗೂ ಹೂಡಿಕೆ ಆಕರ್ಷಣೆಯಲ್ಲಿ ಸರ್ಕಾರ ಸಾಧನೆ ಮಾಡಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ಅಭಿವೃದ್ಧಿ ಮತ್ತು ಭದ್ರತೆಗೆ ಆದ್ಯತೆ : “ಅಸ್ಸಾಂ ಅನ್ನು ಅಭಿವೃದ್ಧಿ ಹೊಂದಿದ ಹಾಗೂ ಸುರಕ್ಷಿತ ರಾಜ್ಯವನ್ನಾಗಿ ಮಾಡುವುದು ನಮ್ಮ ಸಂಕಲ್ಪ. ಜನರ ಆಶೀರ್ವಾದದಿಂದ ಮತ್ತೆ ಅಧಿಕಾರಕ್ಕೆ ಬಂದಿರುವ ನಾವು ಇನ್ನಷ್ಟು ಸಮರ್ಪಣೆ ಮತ್ತು ನಮ್ರತೆಯಿಂದ ಕೆಲಸ ಮಾಡುತ್ತೇವೆ” ಎಂದು ದಿಲೀಪ್ ಸೈಕಿಯಾ ಹೇಳಿದ್ದಾರೆ.

ಈ ಬಾರಿ ಹೊಸ ಸರ್ಕಾರದಲ್ಲಿ ಕೆಲ ಯುವ ಮುಖಗಳಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದ್ದು, ಸಂಪುಟ ರಚನೆ ಕುರಿತ ಚರ್ಚೆಗಳು ಈಗಾಗಲೇ ಆರಂಭಗೊಂಡಿವೆ. ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳು ರಾಜ್ಯದಲ್ಲಿ ಸಂಘಟನಾ ಬಲವನ್ನು ಮತ್ತಷ್ಟು ಗಟ್ಟಿಗೊಳಿಸುವತ್ತ ಗಮನ ಹರಿಸಿವೆ.

ಉತ್ತರ ಪೂರ್ವ ರಾಜಕೀಯದಲ್ಲಿ ಬಿಜೆಪಿ ಪ್ರಭಾವ: ಅಸ್ಸಾಂನಲ್ಲಿ ಸತತ ಮೂರನೇ ಬಾರಿ ಬಿಜೆಪಿ ಸರ್ಕಾರ ರಚನೆಯಾಗುತ್ತಿರುವುದು ಉತ್ತರ ಪೂರ್ವ ಭಾರತದ ರಾಜಕೀಯದಲ್ಲಿ ಪಕ್ಷದ ಬಲವನ್ನು ಮತ್ತಷ್ಟು ದೃಢಪಡಿಸಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈ ಭಾಗದ ಮೂಲಸೌಕರ್ಯ ಅಭಿವೃದ್ಧಿ, ಸಂಪರ್ಕ ವ್ಯವಸ್ಥೆ ಮತ್ತು ಹೂಡಿಕೆ ವೃದ್ಧಿಗೆ ವಿಶೇಷ ಆದ್ಯತೆ ನೀಡಿರುವುದು ಚುನಾವಣಾ ಫಲಿತಾಂಶಗಳ ಮೇಲೂ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ.