ಪಾಟ್ನಾ: ಬಿಹಾರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ನೂತನ ಸಂಪುಟವನ್ನು ವಿಸ್ತರಿಸಿದ್ದು, ಒಟ್ಟು 32 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಸರ್ಕಾರದಲ್ಲಿ ಬಿಜೆಪಿ, ಜೆಡಿಯು, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ಇತರೆ ಮೈತ್ರಿ ಪಕ್ಷಗಳ ನಾಯಕರಿಗೆ ಅವಕಾಶ ನೀಡಲಾಗಿದೆ.
ರಾಜಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕರು ಸಾಕ್ಷಿಯಾದರು.
ನಿಶಾಂತ್ ಕುಮಾರ್‌ಗೆ ಸಚಿವ ಸ್ಥಾನ : ಮಾಜಿ ಮುಖ್ಯಮಂತ್ರಿ ನೀತಿಶ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಮೊದಲ ಬಾರಿಗೆ ಸಚಿವ ಸಂಪುಟ ಪ್ರವೇಶಿಸಿರುವುದು ಬಿಹಾರ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಹಲವು ವರ್ಷಗಳಿಂದ ರಾಜಕೀಯದಿಂದ ದೂರವಿದ್ದ ನಿಶಾಂತ್ ಕುಮಾರ್ ಇದೀಗ ನೇರವಾಗಿ ಆಡಳಿತದ ಭಾಗವಾಗಿರುವುದು ಜೆಡಿಯು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಅನುಭವ ಮತ್ತು ಯುವ ನಾಯಕತ್ವಕ್ಕೆ ಒತ್ತು : ಹೊಸ ಸಂಪುಟದಲ್ಲಿ ಅನುಭವಿಗಳಿಗೂ ಯುವ ನಾಯಕರಿಗೂ ಸಮಾನ ಆದ್ಯತೆ ನೀಡಲಾಗಿದೆ. ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ, ಹಿರಿಯ ನಾಯಕರು ಶ್ರಾವಣ್ ಕುಮಾರ್ ಹಾಗೂ ಅಶೋಕ್ ಚೌಧರಿ ಮತ್ತೆ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಬಿಜೆಪಿ ಮತ್ತು ಜೆಡಿಯು ಜೊತೆಗೆ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ (ರಾಮ್ ವಿಲಾಸ್) ಹಾಗೂ ಜಿತನ್ ರಾಮ್ ಮಾಂಝಿ ಅವರ ಹ್ಯಾಮ್ ಪಕ್ಷಕ್ಕೂ ಸಮರ್ಪಕ ಪ್ರತಿನಿಧಿತ್ವ ನೀಡಲಾಗಿದೆ.
ಸಾಮ್ರಾಟ್ ಚೌಧರಿ ನೇತೃತ್ವದಲ್ಲಿ ಹೊಸ ಅಧ್ಯಾಯ : ಸಾಮ್ರಾಟ್ ಚೌಧರಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದು ಮೊದಲ ದೊಡ್ಡ ಸಂಪುಟ ವಿಸ್ತರಣೆಯಾಗಿದೆ. ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಸಭೆಗೆ ಆಯ್ಕೆಯಾಗಿ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದ ಬಳಿಕ ಬಿಹಾರದಲ್ಲಿ ರಾಜಕೀಯ ಬದಲಾವಣೆ ನಡೆದಿತ್ತು. ಬಿಜೆಪಿ ಮೊದಲ ಬಾರಿಗೆ ಸ್ಪಷ್ಟ ನಾಯಕತ್ವದೊಂದಿಗೆ ಸರ್ಕಾರ ರಚಿಸಿದ್ದು, ಈಗ ಹೊಸ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯ ಆರಂಭಿಸಿದೆ.
ಚುನಾವಣೆಗೆ ಒಗ್ಗಟ್ಟಿನ ಸಂದೇಶ : ಸಂಪುಟ ವಿಸ್ತರಣೆ ಸಮಾರಂಭದ ಮೂಲಕ ಎನ್‌ಡಿಎ ಮೈತ್ರಿಕೂಟವು ಬಿಹಾರದಲ್ಲಿ ತನ್ನ ಒಗ್ಗಟ್ಟನ್ನು ಪ್ರದರ್ಶಿಸಿದೆ. ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ಸಮುದಾಯ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಗಮನಿಸಿ ಸಚಿವ ಸ್ಥಾನ ಹಂಚಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಹೊಸ ಸರ್ಕಾರ ಅಭಿವೃದ್ಧಿ, ಮೂಲಸೌಕರ್ಯ, ಉದ್ಯೋಗ ಹಾಗೂ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಎನ್‌ಡಿಎ ನಾಯಕರು ತಿಳಿಸಿದ್ದಾರೆ.





















