Home Advertisement
Home ಸಿನಿ ಮಿಲ್ಸ್ ಟಾಕ್ಸಿಕ್‌ ಗಾಸಿಪ್‌ಗೆ ನಟಿ ಕಿಯಾರಾ ಗರಂ: ಯಶ್ ಜೊತೆಗಿನ ಬೋಲ್ಡ್ ದೃಶ್ಯಕ್ಕೆ ಆಕ್ಷೇಪ; ವೈರಲ್ ಆಗುತ್ತಿದ್ದ...

ಟಾಕ್ಸಿಕ್‌ ಗಾಸಿಪ್‌ಗೆ ನಟಿ ಕಿಯಾರಾ ಗರಂ: ಯಶ್ ಜೊತೆಗಿನ ಬೋಲ್ಡ್ ದೃಶ್ಯಕ್ಕೆ ಆಕ್ಷೇಪ; ವೈರಲ್ ಆಗುತ್ತಿದ್ದ ವದಂತಿಯ ಅಸಲಿ ಸತ್ಯ ಇಲ್ಲಿದೆ!

0
40

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ದಿನಕ್ಕೊಂದು ಹೊಸ ಸುದ್ದಿಯ ಮೂಲಕ ಸುದ್ದಿಯಲ್ಲಿದೆ. ಇತ್ತೀಚೆಗಷ್ಟೇ ಈ ಚಿತ್ರದ ನಾಯಕಿ, ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಸಿನಿಮಾದ ಬೋಲ್ಡ್ ದೃಶ್ಯಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದವು. ಇದೀಗ ನಟಿ ಕಿಯಾರಾ ಈ ಎಲ್ಲಾ ಗಾಳಿಸುದ್ದಿಗಳಿಗೆ ಸ್ವತಃ ತೆರೆ ಎಳೆದಿದ್ದಾರೆ.

ವದಂತಿಯ ಹಿನ್ನೆಲೆ: ‘ಟಾಕ್ಸಿಕ್’ ಚಿತ್ರವು ಪಕ್ಕಾ ಆಕ್ಷನ್ ಮತ್ತು ಮಾಸ್ ಎಲಿಮೆಂಟ್ಸ್ ಹೊಂದಿರುವ ಸಿನಿಮಾವಾಗಿದ್ದು, ಇದರಲ್ಲಿ ಯಶ್ ಮತ್ತು ಕಿಯಾರಾ ನಡುವೆ ಕೆಲವು ಬೋಲ್ಡ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿತ್ತು. ಆದ್ರೆ ಚಿತ್ರದ ಅಂತಿಮ ಔಟ್‌ಪುಟ್ ನೋಡಿದ ನಂತರ ಕಿಯಾರಾ ಅಡ್ವಾಣಿ ಆ ದೃಶ್ಯಗಳ ತೀವ್ರತೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಮತ್ತು ಆ ಸೀನ್‌ಗಳನ್ನು ಕತ್ತರಿಸುವಂತೆ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ ಎಂಬ ಸುದ್ದಿಗಳು ವೈರಲ್ ಆಗಿದ್ದವು.

ಸುಳ್ಳು ಸುದ್ದಿಗೆ ಬ್ರೇಕ್: ಈ ಗಾಸಿಪ್‌ಗಳು ಹದ್ದುಮೀರುತ್ತಿದ್ದಂತೆ ಇನ್ಸ್ಟಾಗ್ರಾಮ್‌ನಲ್ಲಿ ಸ್ಪಷ್ಟನೆ ನೀಡಿದ ಕಿಯಾರಾ, ಈ ಸುದ್ದಿಯ ಸ್ಕ್ರೀನ್‌ಶಾಟ್ ಹಂಚಿಕೊಂಡು, “ಇದೆಲ್ಲಾ ಶುದ್ಧ ಸುಳ್ಳು, “Absolute nonsense” ಎಂದು ಬರೆಯುವ ಮೂಲಕ ವದಂತಿಗಳನ್ನು ತಳ್ಳಿಹಾಕಿದ್ದಾರೆ. ತಾವು ಯಾವುದೇ ದೃಶ್ಯಗಳನ್ನು ತೆಗೆದುಹಾಕಲು ಹೇಳಿಲ್ಲ ಹಾಗೂ ಹರಡುತ್ತಿರುವ ಸುದ್ದಿಗಳು ಕೇವಲ ಕಪೋಲಕಲ್ಪಿತ ಎಂದು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ.

ತಾರಾಬಳಗ ಮತ್ತು ಬಿಡುಗಡೆ: ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಗ್ಯಾಂಗ್‌ಸ್ಟರ್ ಕಥಾಹಂದರದ ಸಿನಿಮಾದಲ್ಲಿ ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಅವರಂತಹ ದೊಡ್ಡ ತಾರಾಬಳಗವೇ ಇದೆ. ಸದ್ಯ ಕಾರಣಾಂತರಗಳಿಂದ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದ್ದು, ಚಿತ್ರತಂಡವು ಶೀಘ್ರದಲ್ಲೇ ಹೊಸ ಅಪ್‌ಡೇಟ್ ನೀಡುಬಹುದು ಎಂಬ ನಿರೀಕ್ಷೆಯಿದೆ.