ಕೋಣಂದೂರು ಲಿಂಗಪ್ಪ, ಕೆ.ವಿ. ಅಕ್ಷರ, ಪ್ರೊ. ರಂಗನಾಥ್ ಅವರಿಗೆ ಮೇ 6ರಂದು ಡಿ.ಲಿಟ್ ಪ್ರದಾನ
ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯ ತನ್ನ 35ನೇ ವಾರ್ಷಿಕ ಘಟಿಕೋತ್ಸವದ ಅಂಗವಾಗಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ (ಡಿ.ಲಿಟ್) ಪದವಿ ಪ್ರದಾನ ಮಾಡಲು ನಿರ್ಧರಿಸಿದೆ. ಮೇ 6ರಂದು ನಡೆಯಲಿರುವ ಘಟಿಕೋತ್ಸವದಲ್ಲಿ ಈ ಗೌರವ ಪ್ರದಾನ ನಡೆಯಲಿದೆ.
ಈ ಬಾರಿ ಸಮಾಜ, ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಕೋಣಂದೂರು ಲಿಂಗಪ್ಪ, ಹಿರಿಯ ರಂಗಕರ್ಮಿ ಕೆ. ವಿ. ಅಕ್ಷರ ಹಾಗೂ ಶಿಕ್ಷಣ ತಜ್ಞ ಪ್ರೊ. ಹೆಚ್. ಎ. ರಂಗನಾಥ್ ಅವರನ್ನು ವಿಶ್ವವಿದ್ಯಾಲಯ ಗೌರವಿಸಲು ಮುಂದಾಗಿದೆ. ರಾಜ್ಯಪಾಲರಿಂದ ಈ ನಿರ್ಧಾರಕ್ಕೆ ಅಧಿಕೃತ ಅನುಮೋದನೆ ದೊರೆತಿದೆ.
ಸಮಾಜಸೇವಕ ಕೋಣಂದೂರು ಲಿಂಗಪ್ಪ : ಶಿವಮೊಗ್ಗ ಜಿಲ್ಲೆಯ ಕೋಣಂದೂರು ಗ್ರಾಮದಲ್ಲಿ ಜನಿಸಿದ ಲಿಂಗಪ್ಪ ಅವರು ಸಮಾಜವಾದಿ ಚಳುವಳಿಯ ಪ್ರಮುಖ ಮುಖವಾಗಿದ್ದರು. ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿ, ನಂತರ ವಕೀಲರಾಗಿ ಸೇವೆ ಸಲ್ಲಿಸಿದರು. ಕರ್ನಾಟಕ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿ, ಸಾಮಾಜಿಕ ನ್ಯಾಯ ಹಾಗೂ ಕನ್ನಡ ಹಿತಕ್ಕಾಗಿ ಹೋರಾಟ ನಡೆಸಿದವರು. “ಉಳುವವನೇ ಹೊಲದೊಡಯ” ಹೋರಾಟ ಸೇರಿದಂತೆ ಹಲವು ಚಳುವಳಿಗಳ ಮೂಲಕ ಅವರು ಗುರುತಿಸಿಕೊಂಡಿದ್ದಾರೆ.
ರಂಗಭೂಮಿ ದಿಗ್ಗಜ ಕೆ.ವಿ. ಅಕ್ಷರ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡು ಗ್ರಾಮದ ಕೆ.ವಿ. ಅಕ್ಷರ ಅವರು ಕನ್ನಡ ರಂಗಭೂಮಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ನೀನಾಸಂ ಮೂಲಕ ನಾಲ್ಕು ದಶಕಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಎಪ್ಪತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ನಾಟಕಕಾರ, ನಿರ್ದೇಶಕ, ಅನುವಾದಕ ಮತ್ತು ಅಧ್ಯಾಪಕರಾಗಿ ಅವರ ಸಾಧನೆ ವಿಶಿಷ್ಟವಾಗಿದೆ.
ಶಿಕ್ಷಣ ತಜ್ಞ ಪ್ರೊ. ಹೆಚ್.ಎ. ರಂಗನಾಥ್ : ಹಾಸನ ಮೂಲದ ಪ್ರೊ. ರಂಗನಾಥ್ ಅವರು ತಳಿಶಾಸ್ತ್ರ ಮತ್ತು ವಿಕಾಸಶಾಸ್ತ್ರ ಕ್ಷೇತ್ರದಲ್ಲಿ ಅಗ್ರಗಣ್ಯ ವಿಜ್ಞಾನಿಯಾಗಿ ಗುರುತಿಸಿಕೊಂಡಿದ್ದಾರೆ. ನ್ಯಾಕ್ ಮಾಜಿ ನಿರ್ದೇಶಕರಾಗಿದ್ದ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ದೇಶದ ಮೊದಲ “ಡ್ರೊಸೊಫಿಲಾ ಸ್ಟಾಕ್ ಸೆಂಟರ್” ಸ್ಥಾಪನೆ ಸೇರಿದಂತೆ ಹಲವು ಶೈಕ್ಷಣಿಕ ಸಾಧನೆಗಳನ್ನು ಮಾಡಿದ್ದಾರೆ.
ಈ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡುವ ಮೂಲಕ ಕುವೆಂಪು ವಿಶ್ವವಿದ್ಯಾಲಯವು ಸಮಾಜ, ಕಲೆ ಮತ್ತು ವಿಜ್ಞಾನ ಕ್ಷೇತ್ರಗಳ ಸಾಧನೆಯನ್ನು ಗೌರವಿಸುತ್ತಿದೆ. ಘಟಿಕೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.























