SK Home Ad
Home ಸಿನಿ ಮಿಲ್ಸ್ ದಳಪತಿ ಈಗ ತಮಿಳುನಾಡಿನ ʻಅಧಿಪತಿʼ: ವಿಜಯ್‌ ಗೆಲುವಿನ ಅಲೆಗೆ ದಕ್ಷಿಣದ ತಾರೆಯರು ಫಿದಾ!

ದಳಪತಿ ಈಗ ತಮಿಳುನಾಡಿನ ʻಅಧಿಪತಿʼ: ವಿಜಯ್‌ ಗೆಲುವಿನ ಅಲೆಗೆ ದಕ್ಷಿಣದ ತಾರೆಯರು ಫಿದಾ!

0
213

ತಮಿಳುನಾಡು ರಾಜಕೀಯದಲ್ಲಿ ದಶಕಗಳ ಕಾಲ ಪ್ರಾಬಲ್ಯ ಹೊಂದಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ ಪಾರುಪತ್ಯಕ್ಕೆ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ ಬ್ರೇಕ್ ಹಾಕಿದೆ. ಚೊಚ್ಚಲ ಚುನಾವಣೆಯಲ್ಲೇ ಅದ್ಭುತ ಪ್ರದರ್ಶನ ನೀಡುತ್ತಿರುವ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಹೊರಹೊಮ್ಮುವ ಸೂಚನೆ ಸಿಗುತ್ತಿದ್ದಂತೆ, ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟ-ನಟಿಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸ್ಟಾರ್‌ ರೌಡಿ ನಟನಿಂದ ಅಭಿನಂದನೆ: ಟಾಲಿವುಡ್ ನಟ ರೌಡಿ ಸ್ಟಾರ್‌ ವಿಜಯ್ ದೇವರಕೊಂಡ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ವಿಜಯ್‌ಗೆ ಶುಭಾಶಯ ಕೋರಿದ್ದಾರೆ. “ತಮಿಳುನಾಡಿನ ಜನರು ತಮ್ಮ ನಾಯಕನ ಪರವಾಗಿ ಬಲವಾಗಿ ನಿಂತಿರುವುದನ್ನು ನೋಡಿ ಸಂತೋಷವಾಗುತ್ತಿದೆ. ತಮಿಳು ರಾಜಕೀಯದ ಈ ಹೊಸ ಹಂತ ಮತ್ತು ಹೊಸ ಮುಖವನ್ನು ನೋಡಲು ಉತ್ಸುಕನಾಗಿದ್ದೇನೆ. ವಿಜಯ್ ನೇತೃತ್ವದಲ್ಲಿ ರಾಜ್ಯವು ಸಮೃದ್ಧಿ ಮತ್ತು ಬೆಳವಣಿಗೆಯನ್ನು ಕಾಣಲಿ,” ಎಂದು ದೇವರಕೊಂಡ ಹಾರೈಸಿದ್ದಾರೆ.

ಶುಭ ಕೋರಿದ ತಾರಾ ಬಳಗ: ಹಿರಿಯ ನಟಿ ರಂಭಾ ಮತ್ತು ಜನಪ್ರಿಯ ನಟಿ ಕಾಜಲ್ ಅಗರ್ವಾಲ್ ಕೂಡ ವಿಜಯ್ ಸಾಧನೆಯನ್ನು ಕೊಂಡಾಡಿದ್ದಾರೆ. “ವಿಜಯ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ,” ಎಂದು ರಂಭಾ ಹೇಳಿದ್ದರೆ, “ಇದು ಕೇವಲ ಗೆಲುವಲ್ಲ, ಜನರೊಂದಿಗೆ ನಿಮಗಿರುವ ದೃಢವಾದ ಸಂಪರ್ಕಕ್ಕೆ ಸಂದ ಜಯ,” ಎಂದು ಕಾಜಲ್ ಪ್ರಶಂಸಿಸಿದ್ದಾರೆ. ಇನ್ನು ಯುವ ನಟ ಶಿವಕಾರ್ತಿಕೇಯನ್ ಪ್ರತಿಕ್ರಿಯಿಸಿ, “ನಮ್ಮ ಚಿತ್ರರಂಗದವರೊಬ್ಬರು ಜನಸೇವೆಯ ಇಂತಹ ಉನ್ನತ ಹಂತಕ್ಕೆ ತಲುಪಿರುವುದು ನಮಗೆ ಹೆಮ್ಮೆಯ ಸಂಗತಿ,” ಎಂದು ಬೆಂಬಲ ಸೂಚಿಸಿದ್ದಾರೆ.

ಸಂಭ್ರಮದಲ್ಲಿ ಅಭಿಮಾನಿಗಳು: ಇವರಷ್ಟೇ ಅಲ್ಲದೆ ವೈಭವ್, ಜೀವಾ, ಸಂದೀಪ್ ಕಿಶನ್ ಮತ್ತು ಕನಿಹಾ ಸೇರಿದಂತೆ ಹಲವಾರು ಕಲಾವಿದರು ವಿಜಯ್ ಹೊಸ ರಾಜಕೀಯ ಪಯಣಕ್ಕೆ ಶುಭ ಹಾರೈಸಿದ್ದಾರೆ. ಚುನಾವಣಾ ಆಯೋಗದ ಅಂತಿಮ ಅಧಿಕೃತ ಘೋಷಣೆಗೂ ಮುನ್ನವೇ ವಿಜಯ್ ಅಭಿಮಾನಿಗಳು ರಾಜ್ಯಾದ್ಯಂತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ತಮಿಳುನಾಡು ರಾಜಕಾರಣದಲ್ಲಿ ಇಂದು ದೃಢವಾದ ಹೊಸ ಯುಗ ಆರಂಭವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.