Home Advertisement
Home ಕ್ರೀಡೆ IPL 2026: ಕೋಲ್ಕತ್ತಾಗೆ ಸತತ ಮೂರನೇ ಗೆಲುವು

IPL 2026: ಕೋಲ್ಕತ್ತಾಗೆ ಸತತ ಮೂರನೇ ಗೆಲುವು

0
77

ಹೈದರಾಬಾದ್: ರಘುವಂಶಿ ಅರ್ಧಶತಕದ ನೆರವಿನಿಂದಾಗಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿದೆ.

ಸನ್‌ರೈಸರ್ಸ್‌‌ ನೀಡಿದ್ದ 166 ರನ್‌ಗಳ ಗುರಿಯನ್ನು 18.2 ಓವರ್‌ಗಳಲ್ಲಿ ತಲುಪುವ ಮೂಲಕ ಕೋಲ್ಕತ್ತಾ ತನ್ನ ಪ್ಲೇ ಆಫ್‌ ಆಸೆ ಜೀವಂತವಾಗಿರಿಸಿಕೊಂಡಿದೆ.

ಅಜಿಂಕ್ಯಾ ರಹಾನೆ ಮತ್ತು ಫಿನ್ ಅಲೆನ್ ಜೋಡಿ ಸ್ಫೋಟಕ ಆರಂಭ ನೀಡಿದ್ದು, ಕೇವಲ 4 ಓವರ್‌ಗಳಲ್ಲಿ 49 ರನ್‌ಗಳಿಸಿ ಈ ಜೋಡಿ ಬೇರ್ಪಟ್ಟಿತು. ಈ ವೇಳೆ ಅಲೆನ್ ಕೇವಲ 13 ಎಸೆತದಲ್ಲಿ 29 ಸಿಡಿಸಿ ಔಟಾದರು.

15ನೇ ಓವರ್‌ನ ಕೊನೆಯ ಎಸೆತದಲ್ಲಿ ಅಜಿಂಕ್ಯಾ ರಹಾನೆ (43) ವಿಕೆಟ್‌ ಒಪ್ಪಿಸಿ ಹೊರನಡೆದರು. ಆದರೆ, ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದ ರಘುವಂಶಿ 47 ಎಸೆತದಲ್ಲಿ 59 ರನ್‌ ಗಳಿಸಿ ಗೆಲ್ಲಲು 15 ರನ್‌ಗಳ ಅವಶ್ಯವಿದ್ದಾಗ ಔಟಾದರು.

ಅಂತಿಮವಾಗಿ ರಿಂಕು ಸಿಂಗ್‌ ಅಜೇಯ 22 ಕ್ಯಾಮರಾನ್‌ ಗ್ರೀನ್‌ ಅಜೇಯ 3 ರನ್‌ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದರು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಸನ್‌ರೈಸರ್ಸ್‌ ಹೈದರಾಬಾದ್‌ ಕೇವಲ 19 ಓವರ್‌ಗಳಲ್ಲಿಯೇ 165 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತು.

ಹೈದರಾಬಾದ್‌ ಸ್ಫೋಟಕ ಆರಂಭವನ್ನೇ ಮಾಡಿತಾದರೂ ಬಹುಬೇಗನೆ ಅಭಿಷೇಕ್‌ ಶರ್ಮಾ (15) ವಿಕೆಟ್‌ ಕಳೆದುಕೊಂಡಿತು. ಕೇವಲ 8.5 ಓವರ್‌ಗಳಲ್ಲಿಯೇ 105 ರನ್‌ಗಳಿಸಿ ಬೃಹತ್‌ ಮೊತ್ತ ಪೇರಿಸುವ ಲೆಕ್ಕಾಚಾರದಲ್ಲಿದ್ದ ಹೈದರಾಬಾದ್‌ ತಂಡಕ್ಕೆ ವರುಣ ಚಕ್ರವರ್ತಿ ಅಡ್ಡಿಯಾದರು.

ಟ್ರಾವಿಸ್‌ ಹೆಡ್‌ ಕೇವಲ 28 ಎಸೆತದಲ್ಲಿ 9 ಬೌಂಡರಿ, 3 ಸಿಕ್ಸರ್‌ಗಳ ನೆರವಿನಿಂದ 61 ರನ್‌ಗಳಿಸಿ ವರುಣ ಚಕ್ರವರ್ತಿ ಎಸೆತದಲ್ಲಿ ಕ್ಯಾಮರೂನ್ ಗ್ರೀನ್‌ಗೆ ಕ್ಯಾಚ್‌ ನೀಡಿ ಔಟಾದರು.

ಹೆಡ್‌ ಹೊರನಡೆಯುತ್ತಿದ್ದಂತೆ ಒಬ್ಬರ ಹಿಂದೆ ಒಬ್ಬರಂತೆ ಹೈದರಾಬಾದ್‌ ಆಟಗಾರರು ಪೆವಿಲಿಯನ್‌ ಪರೇಡ್‌ ನಡೆಸ ತೊಡಗಿದರು. ಇದರ ಮೊದಲ ವಿಕೆಟ್‌ ಬಳಿಕ ಕ್ರಿಸ್‌ಗೆ ಬಂದಿದ್ದ ಇಶಾನ್‌ ಕಿಶಾನ್‌ 29 ಎಸೆತದಲ್ಲಿ 4 ಬೌಂಡರಿ, 2 ಸಿಕ್ಸರ್‌ ಸೇರಿದಂತೆ 42 ರನ್‌ಗಳಿಸಿ 7ನೇಯವರಾಗಿ ಔಟಾದರು.

ಸನ್‌ರೈಸರ್ಸ್‌ ತಂಡದ ಆರು ಆಟಗಾರರನ್ನು ಒಂದಂಕಿಯ ಮೊತ್ತವನ್ನೂ ದಾಟದಂತೆ ತಡೆದರೆ, ಹೆನ್ರಿಕ್ ಕ್ಲಾಸೆನ್ (11), ಪ್ಯಾಟ್ ಕಮ್ಮಿನ್ಸ್ (10) ಅವರನ್ನು ಬಹುಬೇಗನೆ ಔಟ್‌ ಮಾಡುವಲ್ಲಿ ಕೆಕೆಆರ್‌ ಬೌಲರ್‌ಗಳು ಯಶಸ್ವಿಯಾದರು.

ಕೋಲ್ಕತ್ತಾ ನೈಟ್‌ ರೈಡರ್ಸ್‌ ಪರ ವರುಣ್ ಚಕ್ರವರ್ತಿ 36ಕ್ಕೆ 3 ವಿಕೆಟ್‌ ಪಡೆದರೆ, ಕಾರ್ತಿಕ್ ತ್ಯಾಗಿ ಮತ್ತು ಸುನಿಲ್ ನರೈನ್ ತಲಾ 2 ವಿಕೆಟ್‌, ಹಾಗೂ ಅನುಕೂಲ್ ರಾಯ್, ವೈಭವ್ ಅರೋರಾ, ಕ್ಯಾಮರೂನ್ ಗ್ರೀನ್ ತಲಾ 1 ವಿಕೆಟ್‌ ಪಡೆದರು.