ಬೆಂಗಳೂರು: ಸ್ಯಾಂಡಲ್ವುಡ್ ನಟ ಧನ್ವೀರ್ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಸಂಘರ್ಷ ಮತ್ತೊಂದು ಹಂತ ತಲುಪಿದೆ. ಧನ್ವೀರ್ ವಿರುದ್ಧ ವಿಜಯಲಕ್ಷ್ಮಿ ಅವರು ಬೆಂಗಳೂರಿನ 37ನೇ ಹೆಚ್ಚುವರಿ ಮುಖ್ಯ ಮಹಾನಗರ ದಂಡಾಧಿಕಾರಿ ನ್ಯಾಯಾಲಯದಲ್ಲಿ ಮಾನನಷ್ಟ ಖಾಸಗಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಧನ್ವೀರ್ ಅವರು ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ. ಅಲ್ಲದೆ, ಈ ಹೇಳಿಕೆಗಳನ್ನು ಮಾಧ್ಯಮಗಳು ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ಪ್ರಕಟಿಸಿ ಪ್ರಸಾರ ಮಾಡಲಾಗಿದೆ ಎಂದು ವಿಜಯಲಕ್ಷ್ಮಿ ದೂರಿನಲ್ಲಿ ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ವಿಚಾರಣೆಗೆ ಅವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದಾರೆ. ಬಿಎನ್ಎಸ್ ಸೆಕ್ಷನ್ 222(1)ರ ಅಡಿಯಲ್ಲಿ ಖಾಸಗಿ ದೂರನ್ನು ಪರಿಗಣಿಸಿ, ಆರೋಪಿ ಧನ್ವೀರ್ ವಿರುದ್ಧ ಸೆಕ್ಷನ್ 227ರ ಅಡಿಯಲ್ಲಿ ಸಮನ್ಸ್ ಜಾರಿಗೊಳಿಸುವಂತೆಯೂ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚಿನ ದಿನಗಳಲ್ಲಿ ಧನ್ವೀರ್ ಹಾಗೂ ವಿಜಯಲಕ್ಷ್ಮಿ ನಡುವಿನ ಮಾತಿನ ಸಮರ ತೀವ್ರಗೊಂಡಿತ್ತು. ಇದೀಗ ಈ ವಿವಾದ ನ್ಯಾಯಾಲಯದ ಮೆಟ್ಟಿಲೇರಿರುವುದು ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿದೆ.






















