ಬೆಂಗಳೂರು: “ಕೆಎಂಎಫ್ ವತಿಯಿಂದ ಅಭಿನಂದನೆ ಸಲ್ಲಿಸಲು ಬಂದಿದ್ದ ಪದಾಧಿಕಾರಿಗಳಿಗೆ ಮೊಸರಿನ ಬೆಲೆ ಕಡಿಮೆ ಮಾಡಲು ಸೂಚನೆ ನೀಡಿದ್ದೇನೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ಸ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಬಣ್ಣಗಳ ಹಾಲಿನ ದರದಲ್ಲಿನ ವ್ಯತ್ಯಾಸದ ಬಗ್ಗೆ ಕೇಳಿದಾಗ, “ಕೊಬ್ಬಿನಾಂಶ ಹೆಚ್ಚು ಇರುವ ಹಾಲಿನ ದರ ಹೆಚ್ಚಾಗಿದೆ. ಈ ಬಗ್ಗೆ ಅಧಿಕಾರಿಗಳು ಸಂಪೂರ್ಣವಾಗಿ ವಿವರಿಸಲಿದ್ದಾರೆ” ಎಂದು ಹೇಳಿದರು.
“ನೀರಿನ ಬಾಟಲಿ ಬೆಲೆ ಹೆಚ್ಚಾದರೆ ಒಬ್ಬರೂ ಮಾತನಾಡುವುದಿಲ್ಲ. ಏಕೆಂದರೆ ಕೇಂದ್ರ ಸರ್ಕಾರಕ್ಕೆ ಜಿಎಸ್ಟಿ ಹೋಗುತ್ತದೆ. ಹಾಲಿನ ದರ ಹೆಚ್ಚಳ ಮಾಡಿದ್ದರಿಂದ 11 ಲಕ್ಷ ರೈತ ಕುಟುಂಬಗಳಿಗೆ ನೆರವಾಗಲಿದೆ” ಎಂದರು.
ಬಸ್ ದರ ಏರಿಕೆ, ಸಾರಿಗೆ ಇಲಾಖೆ ನಿರ್ಧರಿಸಲಿದೆ: “ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ಪ್ರತಿದಿನ ಡೀಸೆಲ್ ಮೊತ್ತ ಭರಿಸಲು ಕಷ್ಟವಾಗಿದ್ದು, ವಿಶೇಷ ಅನುದಾನ ನೀಡಿ ಸಾರಿಗೆ ವ್ಯವಸ್ಥೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಬಸ್ ಸಂಚಾರ ಕಡಿಮೆ ಇರುವ ಕಡೆಗಳಲ್ಲಿ ಹೊಸ ಲೆಕ್ಕಾಚಾರದ ಮೂಲಕ ಬಸ್ ಓಡಿಸಲು ತೀರ್ಮಾನ ಮಾಡಲಾಗಿದೆ. ದರ ಏರಿಕೆ ಬಗ್ಗೆ ಸಾರಿಗೆ ಇಲಾಖೆಯೇ ನಿರ್ಧಾರ ಕೈಗೊಳ್ಳಲು ಸೂಚಿಸಲಾಗಿದೆ” ಎಂದರು.
ಗುತ್ತಿಗೆದಾರರಿಗೆ 38 ಸಾವಿರ ಕೋಟಿ ಬಾಕಿ: ಗುತ್ತಿಗೆದಾರರ ಪದಾಧಿಕಾರಿಗಳು ಮೂರು ಬೇಡಿಕೆಗಳನ್ನು ಇಟ್ಟಿರುವ ಬಗ್ಗೆ ಗುತ್ತಿಗೆದಾರರೊಂದಿಗೆ ಚರ್ಚಿಸಿದ್ದು 38 ಸಾವಿರ ಕೋಟಿ ರೂ. ಬಾಕಿ ಇದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲದಲ್ಲಿ ಕೊನೆ 6 ತಿಂಗಳ ಕೆಲಸಗಳು ಬಾಕಿ ಉಳಿದಿದೆ. ಈಗ ನಾವು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದೇವೆ. ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆಯ ಬಿಲ್ಲುಗಳು ಸರಿಮಾಡಲಾಗುತ್ತಿದೆ. ಕಾವೇರಿ ನೀರಾವರಿ ಯೋಜನೆಯ ಕೆಲಸಗಳ ಬಾಕಿ ಬಿಲ್ಲುಗಳು ಬಹಳಷ್ಟಿವೆ. ಗುತ್ತಿಗೆದಾರರ ಸಂಘದ ಕೆಲವು ಬೇಡಿಕೆಗಳನ್ನು ಒಪ್ಪಿಕೊಳ್ಳಲಾಗಿದೆ” ಎಂದರು.
ಹಾಲು ಒಕ್ಕೂಟಗಳಿಂದ ಸಿಎಂಗೆ ಅಭಿನಂದನೆ: ಸೋಮವಾರ ಮಧ್ಯಾಹ್ನ ಕರ್ನಾಟಕ ಹಾಲು ಮಹಾ ಮಂಡಲ ಮತ್ತು ಜಿಲ್ಲಾ ಹಾಲು ಒಕ್ಕೂಟಗಳ ಪದಾಧಿಕಾರಿಗಳು ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಅಭಿನಂದಿಸಿದರು.
ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಮಾತನಾಡಿ, “ರಾಜ್ಯದಲ್ಲಿ ಪ್ರತಿನಿತ್ಯ 1 ಕೋಟಿ 15 ಲಕ್ಷ ಲೀ ಉತ್ಪಾದನೆ ಆಗುತ್ತಿದ್ದು. ಖಾಸಗಿ ಹಾಲಿನ ಖರೀದಿಯೂ ಉತ್ತರ ಕರ್ನಾಟಕದಲ್ಲಿ ಹೆಚ್ಚಿದೆ. ಹಾಲಿನ ದರ ಏರಿಕೆಯಿಂದ 11 ಲಕ್ಷ ರೈತ ಕುಟುಂಬಗಳು ಮಾತ್ರವಲ್ಲ 25 ಲಕ್ಷ ಹಾಲು ಮಾರಾಟಗಾರರಿಗೆ ಕೂಡ ಕುಟುಂಬಗಳಿಗೆ ನೆರವಾಗಲಿದೆ ಎಂದು ವಿವರಿಸಿದರು.
ಇತರ ರಾಜ್ಯಗಳಲ್ಲಿ ಹೆಚ್ಚು ದರ: ತಮಿಳುನಾಡು ಸರ್ಕಾರ 12 ರೂ. ಹೆಚ್ಚಿಸಿದೆ. ನಂದಿನಿ ಉತ್ಪನ್ನಗಳು ತಮಿಳುನಾಡು, ಕೇರಳ, ಆಂಧ್ರ ಮಹಾರಾಷ್ಟ್ರ ರಾಜ್ಯಗಳಿಗೆ ಹೋಗುತ್ತಿದೆ. ಆ ರಾಜ್ಯಗಳಲ್ಲಿ ಹಾಲಿನ ಬೆಲೆ ನಮ್ಮ ರಾಜ್ಯಕ್ಕಿಂತಲೂ ಹೆಚ್ಚಿದೆ. ಹಾಲಿನ ಪುಡಿ ರಾಷ್ಟ್ರೀಯ ಮಾರುಕಟ್ಟೆಗೆ ತಲುಪುತ್ತದೆ. ಅಮೂಲ್ ಅವರು ಕೂಡ ದರ ಹೆಚ್ಚಿಸಿದ್ದಾರೆ” ಎಂದು ಮಾಹಿತಿ ನೀಡಿದರು.
“ಹಾಲಿನ ದರ ಏರಿಕೆಯಿಂದ ಬಹುಪಾಲು ರೈತರಿಗೆ ನೆರವಾಗಲಿದ್ದು, ಒಕ್ಕೂಟಕ್ಕೆ ಉಳಿಯುವುದು 60 ಪೈಸೆ ಮಾತ್ರ. 20 ಲಕ್ಷ ಲೀ. ಹಾಲು ಹೊರರಾಜ್ಯಗಳಿಗೆ ಹೋಗುತ್ತಿದ್ದು, ನಂದಿನಿ ಹಾಲಿನ ಗುಣಮಟ್ಟ ಅತ್ಯುತ್ತಮವಾಗಿದೆ ಎಂದು ಪ್ರಮಾಣ ಪತ್ರವೂ ದೊರೆತಿದೆ. 5 ಲಕ್ಷ ಯುವಕರಿಗೆ ಉದ್ಯೋಗ ಸೃಷ್ಟಿಯಾಗುವ ಅವಕಾಶವಿದೆ” ಎಂದರು.




















