ಕೊಪ್ಪಳ: ರಾಜ್ಯದ ನಡೆದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿಯೂ ಬಿಜೆಪಿ ಬಹುಮತ ಪಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆ ಬರುವ ಉಪ ಚುನಾವಣೆ ಫಲಿತಾಂಶದಲ್ಲಿ ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ. ನಾವು ಮಾಡಿರುವ ಸಾಧನೆಗಳು ಮತ್ತು ಚುನಾವಣೆಯಲ್ಲಿ ಸಂಘಟಿತವಾದ ಪ್ರಚಾರದ ಪರಿಣಾಮ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಗಳಿಸುವ ವಿಶ್ವಾಸ ಇದೆ. ಅಲ್ಲದೇ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ನಲ್ಲಿ ಕೂಡಾ ಬಿಜೆಪಿ ಗೆಲ್ಲುತ್ತದೆ ಎಂದು ಎಲ್ಲ ಸಮೀಕ್ಷೆ ಹೇಳಿದೆ. ಈ ಭಾರಿ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪರಿವರ್ತನೆಯಾಗುತ್ತದೆ. ಭಾರತದ ರಾಜಕೀಯ ದಿಕ್ಸೂಚಿ ಬದಲಾವಣೆಯಾಗುವ ಫಲಿತಾಂಶ ಬರುತ್ತದೆ ಎಂದು ಹೇಳಿದರು.
ಕಾಂಗ್ರೆಸ್‌ಗೆ ಮುಖಭಂಗ: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಮರು ಮತ ಎಣಿಕೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ರಾಜ್ಯವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿ ಪ್ರಾಚೀನ ಕಾಲಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ತಂತ್ರಜ್ಞಾನ ಬಹಳಷ್ಟು ಮುಂದೆ ಹೋಗಿದೆ. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಕೂಡಾ ಹಲವು ಚುನಾವಣೆಗಳಾಗಿವೆ. ಕಾಂಗ್ರೆಸ್ ಪಕ್ಷ ಸೋಲುತ್ತಿರುವುದರಿಂದ ಬ್ಯಾಲೆಟ್ ಪೇಪರ್ ಕಡೆಗೆ ಹೋಗುತ್ತಿದೆ. ಆದರೆ, ಬ್ಯಾಲೆಟ್ ಪೇಪರ್‌ನಲ್ಲಿ ಮೋಸ ಮಾಡಿ ಗೆದ್ದು ಈಗ ಸೋತಿರುವುದು ಕಾಂಗ್ರೆಸ್‌ಗೆ ಮುಖಭಂಗ ಆಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಆಡಳಿತ ಹಳಿ ತಪ್ಪಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತೋಗಿದೆ, ರಾಜ್ಯದಲ್ಲಿ ಆಡಳಿತ ಸ್ಥಗಿತವಾಗಿದೆ ಎಂದರು.























