Home Advertisement
Home ನಮ್ಮ ಜಿಲ್ಲೆ ದಾವಣಗೆರೆ ಪೀಠದಲ್ಲಿ ಲೆಕ್ಕ ವಿವಾದ ತೀವ್ರ: ಸಭೆಗೂ ಮುನ್ನವೇ ಭಕ್ತರ ನಿರ್ಗಮನ

ಪೀಠದಲ್ಲಿ ಲೆಕ್ಕ ವಿವಾದ ತೀವ್ರ: ಸಭೆಗೂ ಮುನ್ನವೇ ಭಕ್ತರ ನಿರ್ಗಮನ

0
115

ದಾವಣಗೆರೆ: ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಲೆಕ್ಕಾಚಾರ ಮತ್ತು ಪೀಠದ ಜವಾಬ್ದಾರಿ ಕುರಿತ ಗೊಂದಲ ಮತ್ತಷ್ಟು ತೀವ್ರಗೊಂಡಿದೆ. ಇತ್ತೀಚೆಗೆ ನಡೆದ ಸ್ಪಷ್ಟೀಕರಣ ಸಭೆಯಲ್ಲಿ ಪ್ರಮುಖ ಮುಖಂಡರೊಬ್ಬರು, ಶ್ರೀ ವಚನಾನಂದ ಸ್ವಾಮೀಜಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಪಾರದರ್ಶಕ ಲೆಕ್ಕ ನೀಡುವಂತೆ ಒತ್ತಾಯಿಸಿದ್ದಾರೆ.

“ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ” : ಮುಖಂಡರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮಾರ್ಚ್ 10ರಂದು ನೀಡಿದ ತಮ್ಮ ಭಾಷಣವನ್ನು ಕೆಲವು ಹಿತಾಸಕ್ತಿಗಳು ತಪ್ಪಾಗಿ ಬಿಂಬಿಸುತ್ತಿವೆ ಎಂದು ದೂರಿದರು. ಮಹಾಭಾರತದ “ಅಶ್ವತ್ಥಾಮ ಹತಃ ಕುಂಜರಃ” ಪ್ರಸಂಗವನ್ನು ಉಲ್ಲೇಖಿಸಿ, “ನನ್ನ ಮಾತಿನ ಅರ್ಥವನ್ನು ಬಿಟ್ಟು ಭಾಗಶಃ ಮಾತ್ರ ವೈರಲ್ ಮಾಡಲಾಗಿದೆ” ಎಂದು ಅವರು ಹೇಳಿದ್ದಾರೆ.

ಗಡುವಿನ ವಿಚಾರ ಮತ್ತೆ ಚರ್ಚೆಗೆ : ಮಾರ್ಚ್ 10ರ ಸಭೆಯಲ್ಲಿ ಲೆಕ್ಕ ನೀಡಲು ಒಂದು ವಾರದ ಗಡುವು ನೀಡಲಾಗಿತ್ತು. ಬಳಿಕ ಸ್ವಾಮೀಜಿಯವರೇ 24ರಂದು ದಿನಾಂಕ ನಿಗದಿ ಮಾಡಿದ್ದರು ಎಂದು ಮುಖಂಡರು ನೆನಪಿಸಿದರು. ಆದರೆ ಆ ಗಡುವಿನೊಳಗೆ ಸ್ಪಷ್ಟ ಲೆಕ್ಕ ನೀಡದಿರುವುದು ವಿವಾದಕ್ಕೆ ಕಾರಣವಾಗಿದೆ.

ಪೀಠದ ಜವಾಬ್ದಾರಿ ಕುರಿತು ಪ್ರಶ್ನೆ : “ಪೀಠದ ಜವಾಬ್ದಾರಿ ಬಗ್ಗೆ ಸ್ವಾಮೀಜಿಗಳು ಸ್ಪಷ್ಟ ನಿಲುವು ತಳೆಯಬೇಕಿತ್ತು. ನಿಗದಿತ ಸಮಯದಲ್ಲಿ ನಿರ್ಧಾರ ತಿಳಿಸಿ ಅದಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕಾಗಿತ್ತು” ಎಂದು ಮುಖಂಡರು ಕಠಿಣವಾಗಿ ಹೇಳಿದ್ದಾರೆ. ಈ ಸಭೆಯ ಉದ್ದೇಶ ಕೇವಲ ಲೆಕ್ಕ ಕೇಳುವುದು ಮಾತ್ರವಲ್ಲ, ಪಾರದರ್ಶಕತೆಗೆ ಎಚ್ಚರಿಕೆ ನೀಡುವುದೂ ಆಗಿತ್ತು ಎಂದು ಸ್ಪಷ್ಟಪಡಿಸಿದರು.

ಸುಳ್ಳು ದೂರು ಆರೋಪ, ಆಕ್ರೋಶ : ಸಭೆಯ ನಡುವೆ ಮತ್ತೊಂದು ಗಂಭೀರ ಆರೋಪವೂ ಕೇಳಿಬಂದಿದೆ. “ನಾನು ಸತ್ತೇ ಹೋಗಿದ್ದೇನೆ ಎಂದು ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡಲಾಗಿದೆ. ಇದರಿಂದ ಇಡೀ ಸಮಾಜವನ್ನು ಗೊಂದಲಕ್ಕೆ ತಳ್ಳಲಾಗಿದೆ” ಎಂದು ವ್ಯಕ್ತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕ್ರಮಕ್ಕೆ ಕೆಲ ಸ್ವಾಮೀಜಿಗಳ ಪ್ರೋತ್ಸಾಹವೂ ಇದೆ ಎಂಬ ಆರೋಪವೂ ಕೇಳಿಬಂದಿದೆ.

ಜಮೀನು ವಿವಾದಕ್ಕೂ ಹೊಸ ತಿರುವು : ಐದು ಎಕರೆ ಜಮೀನಿನ ವಿಚಾರದಲ್ಲೂ ಸ್ಪಷ್ಟನೆ ನೀಡಲಾಗಿದೆ. “ಈ ಜಮೀನು ದಾನವಾಗಿ ಬಂದದ್ದಲ್ಲ, ನಾವು ಹಣ ನೀಡಿ ಖರೀದಿಸಿದ್ದೇವೆ” ಎಂದು ಮುಖಂಡರು ಹೇಳಿದ್ದಾರೆ. ಶಿವಪ್ಪ ಎಂಬವರ ಮೂಲಕ ಪ್ರತಿ ಎಕರೆಗೆ ₹5 ಲಕ್ಷದಂತೆ ಒಪ್ಪಂದ ಮಾಡಿಕೊಂಡಿದ್ದರೂ, ತಾಂತ್ರಿಕ ಕಾರಣಗಳಿಂದ ಒಪ್ಪಂದ ಅವಧಿ ಮುಗಿದು ರೈತರು ಹಿಂಪಡೆಯಲು ಮುಂದಾದರು ಎಂದು ವಿವರಿಸಿದರು.

ಸಭೆ ಆರಂಭಕ್ಕೂ ಮುನ್ನ ಭಕ್ತರ ನಿರ್ಗಮನ : ಸಭೆ ಆರಂಭಕ್ಕೂ ಮುನ್ನವೇ ಬಹುತೇಕ ಭಕ್ತರು ಸಭೆ ತೊರೆದು ಹೊರ ನಡೆದಿದ್ದು, ಇದರಿಂದ ಪರಿಸ್ಥಿತಿ ಮತ್ತಷ್ಟು ಗೊಂದಲಮಯವಾಯಿತು. ಸಭೆಯಲ್ಲಿ ಭಾಗವಹಿಸಿದವರ ಸಂಖ್ಯೆ ನಿರೀಕ್ಷೆಗಿಂತ ಕಡಿಮೆ ಇದ್ದುದಾಗಿ ತಿಳಿದುಬಂದಿದೆ.