SK Home Ad
Home ಸುದ್ದಿ ದೇಶ ನಕ್ಸಲಿಸಂಗೆ ಕೊನೆಯ ಮೊಳೆ: CPI ನಾಯಕ ಮಿಸಿರ್ ಬೆಸ್ರಾ ಬಂಧನ!

ನಕ್ಸಲಿಸಂಗೆ ಕೊನೆಯ ಮೊಳೆ: CPI ನಾಯಕ ಮಿಸಿರ್ ಬೆಸ್ರಾ ಬಂಧನ!

0
54

ಜಾರ್ಖಂಡ್‌ನಲ್ಲಿ ಭದ್ರತಾ ಪಡೆಗಳ ಭರ್ಜರಿ ಕಾರ್ಯಾಚರಣೆ: 40 ವರ್ಷಗಳ ಮಾವೋವಾದಿ ಚಟುವಟಿಕೆಗೆ ತೆರೆ? CPI ನಾಯಕ ಮಿಸಿರ್ ಬೆಸ್ರಾ ಅರೆಸ್ಟ್

ಜಾರ್ಖಂಡ್: ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಗೆ ಭದ್ರತಾ ಪಡೆಗಳು ಭಾರೀ ಹೊಡೆತ ನೀಡಿದ್ದು, ಸಂಘಟನೆಯ ಪೊಲಿಟ್‌ಬ್ಯೂರೋ ಮತ್ತು ಕೇಂದ್ರ ಸಮಿತಿಯ ಕೊನೆಯ ಸಕ್ರಿಯ ಪ್ರಮುಖ ಸದಸ್ಯನೆಂದು ಪರಿಗಣಿಸಲ್ಪಟ್ಟಿರುವ ಮಿಸಿರ್ ಬೆಸ್ರಾ ಅವರನ್ನು ಬಂಧಿಸಲಾಗಿದೆ.

ಜಾರ್ಖಂಡ್ ಜಾಗ್ವಾರ್, ಸಿಆರ್‌ಪಿಎಫ್‌ನ ಕೋಬ್ರಾ ಕಮಾಂಡೋ ಪಡೆಗಳು ಹಾಗೂ ಗುಪ್ತಚರ ಘಟಕಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬೆಸ್ರಾ ಅವರೊಂದಿಗೆ ಇಬ್ಬರು ಸಹಚರರು ಮತ್ತು ಇಬ್ಬರು ಗ್ರಾಮಸ್ಥರನ್ನು ವಶಕ್ಕೆ ಪಡೆಯಲಾಗಿದೆ ಎಂದು ಲಭ್ಯ ಮಾಹಿತಿಗಳು ತಿಳಿಸಿವೆ. ಬೆಸ್ರಾ ಬಂಧನವು ಪೂರ್ವ ಭಾರತದಲ್ಲಿ ಹಲವು ದಶಕಗಳಿಂದ ಸಕ್ರಿಯವಾಗಿದ್ದ ಮಾವೋವಾದಿ ಸಂಘಟನೆಯ ಮೇಲಿನ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಪ್ರಮುಖ ಬೆಳವಣಿಗೆಯಾಗಿದೆ.

ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ಮಾವೋವಾದಿ ಪಯಣ : ಗಿರಿದಿಹ್ ಮೂಲದ ಮಿಸಿರ್ ಬೆಸ್ರಾ 1980ರ ದಶಕದಲ್ಲೇ ಮಾವೋವಾದಿ ಚಳವಳಿಗೆ ಸೇರಿದ್ದ ಎನ್ನಲಾಗಿದೆ. ನಂತರ ಸಂಘಟನೆಯ ಉನ್ನತ ಹಂತಕ್ಕೆ ಏರಿದ ಅವರು, ಕೇಂದ್ರ ಸಮಿತಿ ಹಾಗೂ ಪೊಲಿಟ್‌ಬ್ಯೂರೋದಲ್ಲಿ ಪ್ರಮುಖ ಸ್ಥಾನ ಪಡೆದಿದ್ದರು. ಭದ್ರತಾ ಅಧಿಕಾರಿಗಳ ಪ್ರಕಾರ, ಅವರು ಸಂಘಟನೆಯ ಕೇಂದ್ರ ಮಿಲಿಟರಿ ಆಯೋಗದ ನೇತೃತ್ವದಲ್ಲಿಯೂ ಇದ್ದರು.

ಬೆಸ್ರಾ ವಿರುದ್ಧ ಜಾರ್ಖಂಡ್ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಕೊಲೆ, ಭದ್ರತಾ ಪಡೆಗಳ ಮೇಲಿನ ದಾಳಿ, ಸ್ಫೋಟ ಹಾಗೂ ಸುಲಿಗೆ ಸೇರಿದಂತೆ 150ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ. ಹಿಂದೆಯೂ ಅವರನ್ನು ಭದ್ರತಾ ಪಡೆಗಳು ಬಂಧಿಸಿದ್ದವು. ಆದರೆ ಬಳಿಕ ನಡೆದ ಮಾವೋವಾದಿಗಳ ದಾಳಿಯ ಸಂದರ್ಭದಲ್ಲಿ ಆತ ಬಂಧನದಿಂದ ತಪ್ಪಿಸಿಕೊಂಡಿದ್ದ. ಹೀಗಾಗಿ, ಹಲವು ವರ್ಷಗಳಿಂದ ಭದ್ರತಾ ಸಂಸ್ಥೆಗಳ ಪ್ರಮುಖ ಗುರಿಗಳಲ್ಲಿ ಬೆಸ್ರಾ ಒಬ್ಬನಾಗಿದ್ದ.

16 ಮಾವೋವಾದಿಗಳ ಶರಣಾಗತಿಯಿಂದ ಸಿಕ್ಕ ಸುಳಿವು : ಬೆಸ್ರಾ ಬಂಧನದ ಕಾರ್ಯಾಚರಣೆಗೆ ಮುನ್ನ ಅದೇ ದಿನ 16 ಮಾವೋವಾದಿಗಳು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದರು ಎನ್ನಲಾಗಿದೆ. ಶರಣಾದವರಿಂದ ದೊರೆತ ಗುಪ್ತಚರ ಮಾಹಿತಿಯು ಬೆಸ್ರಾ ಅವರ ಚಲನವಲನ ಹಾಗೂ ಅಡಗುತಾಣದ ಬಗ್ಗೆ ಭದ್ರತಾ ಪಡೆಗಳಿಗೆ ಪ್ರಮುಖ ಸುಳಿವು ನೀಡಿತು ಎನ್ನಲಾಗಿದೆ.

ಈ ಮಾಹಿತಿಯನ್ನು ಆಧಾರವಾಗಿಸಿಕೊಂಡು ಜಾರ್ಖಂಡ್ ಜಾಗ್ವಾರ್, ಸಿಆರ್‌ಪಿಎಫ್ ಕೋಬ್ರಾ ಹಾಗೂ ಗುಪ್ತಚರ ತಂಡಗಳು ಸಂಯೋಜಿತ ಕಾರ್ಯಾಚರಣೆ ನಡೆಸಿದವು. ದಟ್ಟ ಅರಣ್ಯ ಪ್ರದೇಶಗಳಲ್ಲಿ ದೀರ್ಘಕಾಲದಿಂದ ಅಡಗಿ ಕಾರ್ಯನಿರ್ವಹಿಸುತ್ತಿದ್ದ ಬೆಸ್ರಾ ಅವರನ್ನು ಕೊನೆಗೂ ವಶಕ್ಕೆ ಪಡೆಯಲು ಈ ಗುಪ್ತಚರ ಮಾಹಿತಿ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಲಾಗಿದೆ.

ಮಾವೋವಾದಿ ಸಂಘಟನೆಗೆ ದೊಡ್ಡ ಹೊಡೆತ : ಮಿಸಿರ್ ಬೆಸ್ರಾ ಬಂಧನವು ಕೇವಲ ಒಬ್ಬ ಪ್ರಮುಖ ನಾಯಕನ ಬಂಧನವಲ್ಲ; CPI (ಮಾವೋವಾದಿ) ಸಂಘಟನೆಯ ಉನ್ನತ ನಾಯಕತ್ವದ ಮೇಲಿನ ನಿರಂತರ ಒತ್ತಡದ ಪರಿಣಾಮವೆಂದು ಭದ್ರತಾ ವಲಯದಲ್ಲಿ ಪರಿಗಣಿಸಲಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ ಸಂಘಟನೆಯ ಹಲವು ಹಿರಿಯ ನಾಯಕರು ಹತ್ಯೆಗೀಡಾಗಿರುವುದು, ಬಂಧನಕ್ಕೊಳಗಾಗಿರುವುದು ಅಥವಾ ಶರಣಾಗಿರುವುದು ಹಾಗೂ ಹಲವು ಶಸ್ತ್ರಸಜ್ಜಿತ ಕಾರ್ಯಕರ್ತರು ಮುಖ್ಯವಾಹಿನಿಗೆ ಮರಳಿರುವುದರಿಂದ ಸಂಘಟನೆಯ ಕಾರ್ಯಾಚರಣಾ ಸಾಮರ್ಥ್ಯ ಗಣನೀಯವಾಗಿ ಕುಸಿದಿದೆ.

1 ಕೋಟಿ ಬಹುಮಾನ ಘೋಷಿಸಿತ್ತು: 2026ರ ಏಪ್ರಿಲ್‌ನಲ್ಲಿಯೂ ಬೆಸ್ರಾ ಅವರನ್ನು ಬಂಧಿಸಲು ಜಾರ್ಖಂಡ್‌ನ ಸಾರಂಡಾ ಅರಣ್ಯ ಪ್ರದೇಶದಲ್ಲಿ 3,000ಕ್ಕೂ ಹೆಚ್ಚು CRPF CoBRA ಕಮಾಂಡೋಗಳನ್ನು ಒಳಗೊಂಡ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆದಿತ್ತು ಎಂದು ವರದಿಯಾಗಿತ್ತು. ಆ ಸಂದರ್ಭದಲ್ಲಿ ಬೆಸ್ರಾ ಅವರಿಗೆ ₹1 ಕೋಟಿ ಬಹುಮಾನ ಘೋಷಿಸಲಾಗಿತ್ತು ಎಂಬುದೂ ವರದಿಯಾಗಿತ್ತು.