Home Advertisement
Home ಕ್ರೀಡೆ IPL 2026: ಚೆನ್ನೈ ವಿರುದ್ಧ ಗುಜರಾತ್‌ಗೆ ಸುಲಭ ಜಯ

IPL 2026: ಚೆನ್ನೈ ವಿರುದ್ಧ ಗುಜರಾತ್‌ಗೆ ಸುಲಭ ಜಯ

0
39

ಚೆನ್ನೈ: ಸಾಯಿ ಸುದರ್ಶನ ಅವರ ಅತ್ಯುತ್ತಮ ಬ್ಯಾಟಿಂಗ್‌ ನೆರವಿನಿಂದಾಗಿ ಗುಜರಾತ್‌ ಟೈಟನ್ಸ್‌ ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 20 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ.

ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡಿದ್ದ ಗುಜರಾತ್‌ಗೆ ಚೆನ್ನೈ ತಂಡ 158 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ್ದ ಗುಜರಾತ್‌ 16.4 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 162 ರನ್‌ ಗಳಿಸುವ ಮೂಲಕ ಭರ್ಜರಿ ಜಯ ದಾಖಲಿಸಿದೆ.

ಆರಂಭಿಕ ಆಟಗಾರ ಶುಭಮನ್‌ ಗಿಲ್‌ 23 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್‌ನಿಂದ 33 ರನ್‌ ಗಳಿಸಿ ನೂರ್‌ ಅಹ್ಮದ್‌ಗೆ ವಿಕೆಟ್‌ ಒಪ್ಪಿಸಿದರು. ಸಾಯಿ ಸುದರ್ಶನ 46 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸರ್‌ಗಳಿಂದ 87 ರನ್‌ ಗಳಿಸಿ, ಗೆಲುವಿಗೆ 4 ರನ್‌ಗಳು ಬಾಕಿ ಇರುವಾಗ ಅಖೀಲ್‌ ಹೂಸೇನ್‌ ಎಸೆತದಲ್ಲಿ ಕ್ಯಾಚ್‌ ನೀಡಿ ಔಟಾದರು.

ಇನ್ನೂ ಜೋಸ್‌ ಬಟ್ಲರ್‌ ಅಜೇಯ 39 ರನ್‌ ಗಳಿಸಿ ತಂಡದ ಗೆಲುವಿಗೆ ನೆರವಾದರು. ಚೆನ್ನೈ ಪರ ನೂರ್‌ ಅಹ್ಮದ್‌ 29ಕ್ಕೆ1, ಅಖೀಲ್‌ ಹೂಸೇನ್ 46ಕ್ಕೆ 1 ವಿಕೆಟ್‌ ಪಡೆದರು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಗುಜರಾತ್‌ ತನ್ನ ಲೆಕ್ಕಾಚಾರದಂತೆ ಚೆನ್ನೈ ಬ್ಯಾಟ್ಸಮನ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್‌ ಅವರನ್ನು ಕೇವಲ 11 ರನ್‌ಗಳಿಗೆ ಔಟ್‌ ಮಾಡಿತು.

ಸ್ಯಾಮ್ಸನ್‌ ನಿರ್ಗಮನದ ಬಳಿಕ ಚೈನ್ನೈ ಬ್ಯಾಟರ್‌ಗಳ ಪೆವಿಲಿಯನ್‌ ಪರೇಡ್‌ ನಡೆಯಿತು. ಉರ್ವಿಲ್ ಪಟೇಲ್ (4), ಸರ್ಫರಾಜ್ ಖಾನ್ (0), ಡೆವಾಲ್ಡ್ ಬ್ರೆವಿಸ್ (2) ಒಂದಂಕಿ ಮೊತ್ತವನ್ನು ದಾಟದೆ ಪೆವಿಲಿಯನ್‌ ಸೇರಿದರು.

5ನೇ ವಿಕೆಟ್‌ಗೆ ಕ್ರಿಸ್‌ಗೆ ಬಂದ ಶಿವಂ ದುಬೆ 17 ಎಸೆತದಲ್ಲಿ 22 ರನ್‌ ಗಳಿಸಿದರು. ರುತುರಾಜ್-ದುಬೆ ಜೋಡಿ 59 ರನ್‌ಗಳ ಜತೆಯಾಟ ನಡೆಸಿದ್ದೆ ಚೆನ್ನೈ ಪರ ಬಂದ ಅತ್ಯತ್ತಮ ಜತೆಯಾಟವಾಯಿತು.

ಬಳಿಕ ಯಾವೊಬ್ಬ ಆಟಗಾರನೂ ಸಹ ರುತುರಾಜ್ ಜತೆ ಕ್ರಿಸ್‌ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ ಚೆನ್ನೈ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 158 ರನ್‌ ಗಳಿಸಿತು. ರುತುರಾಜ್ 60 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್‌ನಿಂದ 74 ರನ್‌ ಗಳಿಸಿದರು.

ಗುಜರಾತ್‌ ಪರ ಕಗಿಸೊ ರಬಾಡ 23ಕ್ಕೆ 3, ಅರ್ಷದ್ ಖಾನ್ 43ಕ್ಕೆ 2 ವಿಕೆಟ್‌ ಪಡೆದರೆ, ಮನ್ವ ಸುತಾರ್ ಮತ್ತು ಮೊಹಮ್ಮದ್ ಸಿರಾಜ್ ತಲಾ 1 ವಿಕೆಟ್‌ ಪಡೆದರು.