Home Advertisement
Home ಅಂಕಣ ಅಂಕಣ ಬರಹ: ಟಿಸಿಎಸ್ ತಲ್ಲಣ ಎಬ್ಬಿಸಿದ ಪ್ರಶ್ನೆಗಳ ಸುನಾಮಿ!

ಅಂಕಣ ಬರಹ: ಟಿಸಿಎಸ್ ತಲ್ಲಣ ಎಬ್ಬಿಸಿದ ಪ್ರಶ್ನೆಗಳ ಸುನಾಮಿ!

0
123

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ದೇಶದ ಟೆಕ್ ಕಂಪನಿ, ಕಾರ್ಪೋರೇಟ್ ವಲಯದಲ್ಲಿ ಈಗ ತಲ್ಲಣ ಉಂಟಾಗಿದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಿಸಿಎಸ್ ಬಿಪಿಓ ಕಚೇರಿಯಲ್ಲಿ ಒಂದು ನಿರ್ದಿಷ್ಟ ಕೋವಿಗೆ ಸೇರಿದ ಐದಾರು ಟೀಂ ಲೀಡರ್‌ಗಳು ಲೈಂಗಿಕ ಕಿರುಕುಳ, ಮತಾಂತರ, ಲವ್ ಜೆಹಾದ್, ಅಲ್ಲದೇ ದೌರ್ಜನ್ಯ, ಅಮಾನವೀಯವಾಗಿ ನಡೆಸಿಕೊಂಡಿರುವ ಆರೋಪ ಕೇಳಿ ಬಂದ ಹಿನ್ನೆಲೆ ಇಲ್ಲಿ ಈಗ ಎಂಟು ಜನರ ಬಂಧನವಾಗಿದೆ.

ಸಂತ್ರಸ್ತರು ಪೊಲೀಸರ ಮೊರೆ ಹೋಗಿದ್ದಾರೆ. ಸತ್ಯಾಸತ್ಯತೆ ಪರಿಶೀಲನೆಗೆ ಮಹಿಳಾ ಪೊಲೀಸರು ನೆಲ ಒರೆಸುವ ಸ್ವಚ್ಛತಾ ಕಾರ್ಮಿಕರಾಗಿ ಇದ್ದುಕೊಂಡು ತಿಂಗಳುಗಳ ಪರ್ಯಂತ ಮಾಹಿತಿ ಸಂಗ್ರಹಿಸಿದ್ದಾರೆ. ಹಾಗೆಯೇ ಕಿರುಕುಳ ನೀಡುತ್ತಿದ್ದ ಆರೋಪ ಎದುರಿಸುತ್ತಿರುವ, ಲೈಂಗಿಕ ಶೋಷಣೆ ಮಾಡುತ್ತಿದ್ದರು ಎನ್ನಲಾದ ಮುಖ್ಯಸ್ಥರುಗಳ ಬಂಧನವಾಗಿದೆ. ವಿಚಾರಣೆ ಶುರುವಾಗಿದೆ.

ದೇಶದಲ್ಲಿಯೇ ಟಿಸಿಎಸ್ ಕಂಪನಿ ಮೊದಲ ಸ್ಥಾನದಲ್ಲಿರುವ ಸಂಸ್ಥೆ. ರತನ್ ಟಾಟಾ ಮತ್ತು ಅವರ ತಾಂತ್ರಿಕ ಟೀಂ ಅತ್ಯಂತ ದಕ್ಷ ಹಾಗೂ ಸರ್ವ ಸಮಭಾವ, ಗುಣಮಟ್ಟದ ಅಡಿಪಾಯದಲ್ಲಿ ಕಟ್ಟಿ ಬೆಳೆಸಿದ ಸಂಸ್ಥೆಯ ಮೇಲೆ ಈ ಆರೋಪ ಬಂದಿದೆ. ಟಿಸಿಎಸ್ ಮುಖ್ಯಸ್ಥ, ಚಂದ್ರಶೇಖರ ಈ ಪ್ರಕರಣದ ಸಮಗ್ರ ತನಿಖೆಗೇನೋ ಒಪ್ಪಿದ್ದಾರೆ. ಇದು ಬಯಲಾದ ಕೆಲವೇ ದಿನಗಳಲ್ಲಿ ಲೆನ್ಸ್‌ಕಾರ್ಟ್ ಸಂಸ್ಥೆಯ ಮೇಲೂ ಧರ್ಮ-ಜಾತಿ-ಮತ ಆಧರಿತ ಕಿರುಕುಳ ಆರೋಪ ಕೇಳಿ ಬಂದಿದೆ.

ಟಿಸಿಎಸ್ ಒಂದೇ ಅಲ್ಲ. ದೇಶದ ಎಲ್ಲ ಕಾರ್ಪೋರೇಟ್ ಕಂಪನಿಗಳಲ್ಲಿ `ಪ್ರಾಹಿಬಿಷನ್ ಆಫ್ ಸೆಕ್ಸುವಲ್ ಹ್ಯರಾಸ್‌ಮೆಂಟ್ (ಪಾಶ್) ವಿಚಾರಣಾ ಸಮಿತಿ ಇವೆ. ಪಾಶ್‌ಗೆ ಈ ಬಗ್ಗೆ ನಾಸಿಕ್‌ನಿಂದ ದೂರು ಬಂದಿಲ್ಲ. ಆದರೆ ಈಗ ಬಿತ್ತರವಾಗುವ ಸಂಗತಿ ಏನೆಂದರೆ ಮಹಿಳಾ ಉದ್ಯೋಗಿಗಳ ಜೊತೆಗೆ ಕೆಟ್ಟದಾಗಿ ವರ್ತಿಸುವುದು, ಅವರನ್ನು ಧರ್ಮ-ಜಾತಿ ಹಿನ್ನೆಲೆಯಲ್ಲಿ ಹೀಗಳೆಯುವುದು, ಅಸಭ್ಯವಾಗಿ ಅವರನ್ನು ಮುಟ್ಟುವುದು, ಹಿಂಸಿಸುವುದು ಅನೈತಿಕ, ಲೈಂಗಿಕ ಕ್ರಿಯೆಗಳಿಗೆ ಪ್ರಚೋದಿಸುವುದು ಇವೆಲ್ಲ ಆರೋಪಗಳು.

ಮತ್ತೊಂದು ಗಂಭೀರ ಆರೋಪ ಎಂದರೆ, ಭರ್ತಿ ಹಾಗೂ ಟೀಂ ಲೀಡರ್ ಸೌಲಭ್ಯಗಳಿಗೆ ಕೆಲವು ಕೋಮಿನ ಜನರಿಗೆ ಮಾತ್ರ ಅವಕಾಶ ಕಲ್ಪಿಸುವುದು ಮತ್ತು ಯಾರು ಈ ಅನೈತಿಕ ಟ್ರ್ಯಾಪ್‌ಗೆ ಬೆಂಬಲಿಸಿ, ಸಹಕರಿಸುವರೋ ಅವರಿಗೆ ಮಾತ್ರ ಭಡ್ತಿ, ಮುಂಬಡ್ತಿ ಅವಕಾಶ!

ಮಹಾರಾಷ್ಟ್ರ ಸರ್ಕಾರ ಈ ಪ್ರಕರಣದ ವಿಸ್ತೃತ ತನಿಖೆಗೆ ಎಸ್‌ಐಟಿ ರಚಿಸಿದೆ. ಕೆಲ ಸಂಘಟನೆಗಳು ಇದು ಲವ್ ಜೆಹಾದ್ ಎಂದು ಪ್ರತಿಭಟನೆಗೆ ಇಳಿದಿವೆ. ಟಿಸಿಎಸ್ ಅಧ್ಯಕ್ಷ ಚಂದ್ರಶೇಖರ, `ಇಂತಹ ಘಟನೆಯನ್ನು ಎಂದೂ ಬೆಂಬಲಿಸಲ್ಲ’ ಎನ್ನುವ ಕಟ್ಟೆಚ್ಚರಿಕೆಯನ್ನು ನೀಡಿದ್ದಾರೆ.

ಹಾಗೇ ಲೆನ್ಸ್‌ಕಾರ್ಟ್‌ನಲ್ಲಿ ಧಾರ್ಮಿಕ ಚಿಹ್ನೆಗಳನ್ನು (ಮಂಗಲಸೂತ್ರ, ಕುಂಕುಮ, ಸಿಂಧೂರ, ಕಿವಿಯೋಲೆ, ಕಾಲುಂಗುರ ಇತ್ಯಾದಿ) ನಿಷೇಧಿಸಿರುವ ಆರೋಪ ಬಂದಿದೆ. ಆದರೆ ಮತ್ತೊಂದು ಕೋಮಿನ ಧಾರ್ಮಿಕ ಆಚರಣೆ ಮತ್ತು ಸಂಕೇತಗಳನ್ನು ಧರಿಸುವುದಕ್ಕೆ ಈ ಸಂಸ್ಥೆ ಆಕ್ಷೇಪಿಸಿಲ್ಲ. ಸಾರಿ ಉಡುವಂತಿಲ್ಲ. ಹಿಜಾಬ್ ಧರಿಸಬಹುದು ಎನ್ನುವುದು ಈಗ ಈ ಕಂಪನಿ ವಿರುದ್ಧ ಕಿಡಿಗೆ ಕಾರಣವಾಗಿರುವ ಸಂಗತಿ.

ಕಾರ್ಪೋರೇಟ್ ಐಟಿ ಕಂಪನಿಗಳ ನೇಮಕಾತಿಯಿಂದ ಹಿಡಿದು, ಸಿಬ್ಬಂದಿ ನಿರ್ವಹಣೆ, ಆಡಳಿತದ ಬಗ್ಗೆ ವ್ಯವಸ್ಥಿತವಾದಂತಹ ಕಾನೂನು ಚೌಕಟ್ಟುಗಳಿವೆ. ಸದ್ಯಕ್ಕಂತೂ ಐಟಿ ಕಂಪನಿಗಳಲ್ಲಿ ರಾತ್ರಿ ಹಗಲೆನ್ನದೇ ಬಹಳ ಒತ್ತಡದ ಕೆಲಸ ನಿರ್ವಹಿಸಬೇಕಾಗಿದೆ ಎಂಬುದು ನಿಜ. ಯಾವುದೇ ಸಿಬ್ಬಂದಿಯನ್ನು ಮಾತನಾಡಿಸಿದರೂ ಪ್ರಾಬ್ಲೆಂ ಸಾಲ್ವ್ ಮಾಡುವುದರೊಳಗೋ ಅಥವಾ ಸೇವೆ ಕಲ್ಪಿಸುವುದರಲ್ಲೋ ಸದಾ ಬ್ಯೂಸಿ. ವಿದೇಶಿ ಕ್ಲೈಂಟ್‌ಗಳಿದ್ದರೆ ರಾತ್ರಿ ಎಲ್ಲ ಕೆಲಸ. ಇದಕ್ಕೆ ತಕ್ಕ ಸಂಬಳವೂ ಇದೆ ಎನ್ನಿ. ಆದ್ದರಿಂದಲೇ ಒಪ್ಪಿಕೊಂಡು ಕೆಲಸ ಮಾಡುವ ತಂತ್ರಜ್ಞರು ಕಾರ್ಯನಿರ್ವಹಿಸುತ್ತಾರೆ.

ಈಗ ಎದ್ದಿರುವ ಮೂರ‍್ನಾಲ್ಕು ಪ್ರಶ್ನೆಗಳಿಗೆ ಮೊದಲು ಉತ್ತರ ಬೇಕಿದೆ. ಟಿಸಿಎಸ್ ನಾಸಿಕ್ ಘಟಕದಲ್ಲಿ ನಡೆದಿರುವುದಾದರೂ ಏನು? ಮತಾಂತರ, ಅನೈತಿಕ ಹಿಂಸೆ, ಲೈಂಗಿಕ ದೌರ್ಜನ್ಯ, ಕಿರುಕುಳ, ಜಾತಿ ನಿಂದನೆ ಇತ್ಯಾದಿಗಳಷ್ಟೆಯೇ? ಹಾಗಿದ್ದರೆ ಎಂದಿನಿಂದ ಎನ್ನುವುದು.

ಎರಡನೆಯದ್ದು ನಾಸಿಕ್ ಘಟಕದಲ್ಲೊಂದೇ ಈ ಆರೋಪವೇ? ಅಥವಾ ಇನ್ನೆಲ್ಲಾದರೂ ಇಂಥವು ಇವೆಯೇ? ಮೂರು, ಐಟಿ ಕಂಪನಿಗಳ ಸಿಬ್ಬಂದಿ ನಿರ್ವಹಣೆ ಕಾನೂನು ಘಟಕದಲ್ಲಿ ದೋಷವಿದೆಯೇ? ನಾಲ್ಕು, ಅಲ್ಲಿ ಮಾನವೀಯ ಸಂಬಂಧ, ಉದ್ಯೋಗಕ್ಕೆ ಪೂರಕ ವಾತಾವರಣ, ಹಾಗೇ ಔದ್ಯಮಿಕ ಕಾಯ್ದೆ ಕಟ್ಟಳೆಗಳು ಜಾರಿ ಆಗುತ್ತಿವೆಯೇ?

ಇದರೊಟ್ಟಿಗೆ ರಾಜ್ಯ ಸರ್ಕಾರ ಇಂತಹ ಕಾರ್ಪೋರೇಟ್ ಕಚೇರಿ ಒಳಗಿನ ವ್ಯವಹಾರದಲ್ಲಿ ಪೊಲೀಸ್ ತನಿಖೆ ನಡೆಸಬಹುದೇ? ಸಂಸ್ಥೆ ದೂರು ನೀಡುವ ಮೊದಲೇ ಮಹಾರಾಷ್ಟ್ರ ಸರ್ಕಾರ ಪ್ರಕರಣ ದಾಖಲಿಸಿಕೊಂಡು ಕಚೇರಿಗೆ ದಾಳಿ ಮಾಡಿ, ಎಸ್‌ಐಟಿ ರಚಿಸಿ ತನಿಖೆ ಹಿಂದೆ ಇನ್ನೇನಾದರೂ ವ್ಯವಸ್ಥಿತ ಹುನ್ನಾರಗಳಿವೆಯಾ? `ಪಾಶ್’ ಸಮಿತಿಯ ವೈಫಲ್ಯವೇ, ಅಥವಾ ಅಸಮರ್ಥತೆಯೇ? ಕಾರ್ಪೋರೇಟ್ ಕಂಪನಿಗಳ ಕಾನೂನಿನಲ್ಲಿ ಏನೆಲ್ಲ ಬದಲಾವಣೆಗಳು, ಸಿಬ್ಬಂದಿ ಸುರಕ್ಷತೆಯ ಕಾನೂನು ಕಟ್ಟಳೆಗಳು ಇರಬೇಕು? ಇದಕ್ಕಾಗಿ ಏನೆಲ್ಲ ಬದಲಾವಣೆಗಳ ಅಗತ್ಯವಿದೆ ಇತ್ಯಾದಿ ಪ್ರಶ್ನೆಗಳು ಈಗ ಎದ್ದಿವೆ.

ಸುಮಾರು 20ಲಕ್ಷಕ್ಕೂ ಅಧಿಕ ಜನರಿರುವ ಇಂತಹ ಕಾರ್ಪೋರೇಟ್ ಕಂಪನಿಗಳಲ್ಲಿ ಎಲ್ಲ ಸಮುದಾಯದ, ಸಮಾಜದ ಜನ ಇರುತ್ತಾರೆ. ಕಾಶ್ಮೀರ ತುದಿಯಿಂದ ಕೇರಳವರೆಗಿನ ಜನರನ್ನು ಕಂಪನಿಗಳು ನೇಮಕ ಮಾಡಿಕೊಳ್ಳುತ್ತವೆ. ನೇಮಕಕ್ಕೆ ಮತ್ತು ಆ ನಂತರದ ನಿರ್ವಹಣೆಗೆ ತಮ್ಮದೇ ಆದ ಸ್ವಾಯತ್ತ ಕಾನೂನುಗಳನ್ನು ಈ ಕಂಪನಿಗಳು ರಚಿಸಿಕೊಳ್ಳುತ್ತವೆ. ಹಾಗಿದ್ದೂ ಇಂತಹ ಆರೋಪ ಕೇಳಿ ಬಂದದ್ದು ಹೇಗೆ? ಘಟಿಸಿದ್ದು ಹೇಗೆ?

ಎಚ್‌ಆರ್ (ಸಿಬ್ಬಂದಿ ನಿರ್ವಹಣೆ) ಹೆಡ್ ಮತ್ತು ಪ್ರಮುಖ ಆರೋಪ ಹೊತ್ತಿರುವ ನಿದಾ ಖಾನ್ ತಂದೆ ಮತ್ತು ಕೆಲ ಸಂಘಟನೆಗಳು ಇದೊಂದು ಕಟ್ಟುಕತೆ, ಸುಳ್ಳು ಪ್ರಚಾರ. ಸರ್ಕಾರ ಮತ್ತು ಸಮುದಾಯಕ್ಕೆ ಮಸಿ ಬಳೆಯುವ ಘಟನೆ. ಹಾಗೇ ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ.

ನಿದಾ ಖಾನ್ ತಂದೆ ಅಷ್ಟನ್ನೇ ಹೇಳಿಲ್ಲ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವನ್ನು ತಲ್ಲಣಗೊಳಿಸಿದ ಸ್ವಯಂ ಘೋಷಿತ ದೇವಮಾನ ಅಶೋಖ ಖಾರತ್ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಜನರನ್ನು ವಿಮುಖ ಮಾಡುವ ಹುನ್ನಾರವಿದು ಎಂದಿದ್ದಾರೆ. ಅಶೋಕ ಖಾರತ್ ಪ್ರಕರಣದಲ್ಲಿ ರಾಜಕೀಯ ನಾಯಕರು, ಉದ್ಯಮಿಗಳು, ಐಎಎಸ್-ಐಪಿಎಸ್ ಪ್ರಭಾವಿ ಅಧಿಕಾರಿಗಳು, ಸ್ವತಃ ಉಪಮುಖ್ಯಮಂತ್ರಿ ಕೂಡ ಸಿಲುಕಿಕೊಂಡಿರುವುದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಇದನ್ನು ಸೃಷ್ಟಿಸಲಾಗಿದೆ ಎಂಬುದು ಅವರ ಆರೋಪದ ಒಟ್ಟು ಸಾರ. ಈ ಬಗ್ಗೆಯೂ ಸತ್ಯಾಸತ್ಯತೆ ಹೊರಬರಬೇಕಲ್ಲ?

ಏಕೆಂದರೆ ಪಾಶ್ ಮತ್ತು ಕಾರ್ಪೋರೇಟ್ ಹಾಗೂ ಐಟಿ ಕಂಪನಿಗಳ ಕಾರ್ಮಿಕ ಸುರಕ್ಷತಾ ಕಾಯ್ದೆ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಕಾರ್ಮಿಕ ಇಲಾಖೆ ಜಂಟಿಯಾಗಿ ರೂಪಿಸಿದ ಕಾಯ್ದೆ ಇದು. ಇದರ ಅಡಿ ಹಠಾತ್ತಾಗಿ ರಾಜ್ಯ ಸರ್ಕಾರ ಮುನ್ನುಗ್ಗಿದ್ದು ಹೇಗೆ ಎನ್ನುವ ಪ್ರಶ್ನೆಯನ್ನು ಎತ್ತಲಾಗಿದೆ. ಏನೇ ಇದ್ದರೂ, ಕೇಂದ್ರ ಸರ್ಕಾರ ಈಗ ಕಾರ್ಪೋರೇಟ್ ಕಂಪನಿಗಳ ಮತ್ತು ಐಟಿ ಉದ್ಯಮಗಳ ಸಿಬ್ಬಂದಿ ನಿರ್ವಹಣೆ, ಕಾರ್ಮಿಕರ ಸುರಕ್ಷತೆ ಮತ್ತು `ಪಾಶ್’ ಕಾಯ್ದೆಯನ್ನು ವಿಮರ್ಶಿಸಬೇಕಾಗಿದೆ.

ತನಗಂಟಿರುವ ಕಳಂಕವನ್ನು ತೊಳೆದುಕೊಳ್ಳಲು ಟಿಸಿಎಸ್‌ನ ಉನ್ನತ ಆಡಳಿತ ಮಂಡಳಿಯೇ ನೇರವಾಗಿ ಡ್ಯಾಮೇಜ್ ಕಂಟ್ರೋಲ್‌ಗೆ ತೊಡಗಿದೆ. ಇಂತಹ ಸಂಸ್ಥೆಗಳ ಸಂರಕ್ಷಣೆ ಹಾಗೂ ಐಟಿ ಉದ್ಯಮಗಳ ರಕ್ಷಣೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇಂತಹ ಸಂಸ್ಥೆಗಳ ಘನತೆ, ಇವುಗಳ ಸುರಕ್ಷೆಗೆ ಕುಂದು ಬರಬಾರದು.

ರಾಜಕೀಯೇತರವಾಗಿ ಪರಿಣಿತ ಆಡಳಿತಗಾರರಿಂದ ಇದಕ್ಕೆ ಪರಿಹಾರ ಪಡೆಯಬೇಕೇ ವಿನಾ, ರಾಜಕೀಯ ಕಣ್ಣು, ಮತಾಂಧತೆ, ಜಾತಿ ಲೆಕ್ಕಾಚಾರ, ತಕ್ಷಣದ ಲಾಭ- ಹಾನಿಯ ಬಗ್ಗೆ ಯೋಚನೆ ಸಲ್ಲ. ಇಷ್ಟಿದ್ದೂ ರಾಜಕೀಯ ನುಸುಳಿದ್ದರೆ ಬಹುಶಃ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ. ಭವಿಷ್ಯತ್ತಿನ ಪೀಳಿಗೆಯ ಉದ್ಯೋಗದ ಮೇಲೆ ಹಾಗೂ ಔದ್ಯಮಿಕ ಬೆಳವಣಿಗೆ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರೀತು. ಕೇವಲ ಟಿಸಿಎಸ್ ಒಂದೇ ಅಲ್ಲ. ಎಲ್ಲ ಕಾರ್ಪೋರೇಟ್ ಕಂಪನಿಗಳು ನೌಕರರ ವೈಯಕ್ತಿಕ ಸಂಬಂಧ, ದೂರುಗಳು, ಕಂಪನಿ ಹೊರಗೆ ನಡೆಯುವ ವಿದ್ಯಮಾನಗಳಿಗೆ ಜೋಡಿಸಿಕೊಂಡರೆ ಬಹುಶಃ ಇಂತಹ ಸಂಸ್ಥೆಗಳನ್ನು ಕಟ್ಟುವುದು, ಬೆಳೆಸುವುದು ಕಷ್ಟಸಾಧ್ಯ. ಇದು ಹಾಗಾಗದಂತೆಯೂ, ಹೊರ ಶಕ್ತಿಗಳ ಪ್ರವೇಶ ನಡೆಯದಂತೆಯೂ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರ ಹಾಗೂ ಕಾರ್ಪೋರೇಟ್ ಕಂಪನಿಗಳೆರಡರದ್ದೂ ಆಗಿರುತ್ತದೆ.

ಟಿಸಿಎಸ್ ನಾಸಿಕ್‌ನಲ್ಲಿ ನಡೆದಿದೆ ಎನ್ನಲಾದ ಬೆಳವಣಿಗೆ ಆತಂಕಕಾರಿ ಅಷ್ಟೇ ಅಲ್ಲ. ಇಡೀ ಔದ್ಯಮಿಕ ಕ್ಷೇತ್ರಕ್ಕೆ ಆಘಾತಕಾರಿ ಎನ್ನುವುದು ನಿಜ. ಇದನ್ನು ಔದ್ಯಮಿಕ ಕ್ಷೇತ್ರದ ಗಣ್ಯರುಗಳೇ ನಿರ್ವಹಿಸಿಕೊಳ್ಳಬೇಕು. ರಾಜಕೀಯ ಪ್ರವೇಶಿಸಬಾರದು. ಮಾಹಿತಿ ತಂತ್ರಜ್ಞಾನ ಮತ್ತು ಔದ್ಯಮಿಕ ಬೆಳವಣಿಗೆಯಲ್ಲಿ ಹೊಸ ಯುವಕರ ಕನಸುಗಳಿವೆ. ಉದ್ಯೋಗ, ಸುರಕ್ಷತೆಯ ಬಗ್ಗೆ ಸಾಕಷ್ಟು ಕಲ್ಪನೆಗಳನ್ನು ಯುವ ಪೀಳಿಗೆ ಇಟ್ಟುಕೊಂಡಿದೆ. ಭವಿಷ್ಯತ್ತಿನ, ಬದುಕಿನ, ಈ ನಾಡಿನ, ಸಮಾಜದ ಕನಸುಗಳಿವೆ. ಆಸೆ ಆಕಾಂಕ್ಷೆಗಳಿವೆ. ಹಾಗಾಗಿ, ಖಾಸಗಿ ಕಾರ್ಪೋರೇಟ್ ವಲಯಗಳೂ ಸೇರಿದಂತೆ ಎಲ್ಲ ಕರ್ತವ್ಯ ಸ್ಥಳಗಳಲ್ಲಿ ರಾಜಕಾರಣ ಅಥವಾ ಮತಾಂಧ ಶಕ್ತಿಗಳ ನುಸುಳುವಿಕೆಯನ್ನು ವ್ಯಕ್ತಿಗತವಾಗಿ ಹೊಸಕಿ ಹಾಕುವ ಕಾರ್ಯವಾಗಬೇಕಿದೆ. ಇಲ್ಲವಾದರೆ ಯುವಕರ ಕನಸು ಮತ್ತು ಮನಸುಗಳೆರಡೂ ಕಮರಿ ಹೋಗುವ ಸಾಧ್ಯತೆ ಇದೆ. ಎಚ್ಚರ!