ಲಖನೌ: ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ 40 ರನ್‌ಗಳ ಜಯ ಸಾಧಿಸುವ ಮೂಲಕ ಮತ್ತೆ ಜಯದ ಹಾದಿಗೆ ಮರಳಿದೆ.
ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನೀಡಿದ್ದ 160 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಲಖನೌ ಕೇವಲ 119 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿದೆ.
ಲಖನೌನ ಆರಂಭಿಕ ಆಟಗಾರ ಮಿಚಲ್ ಮಾರ್ಷ್ (55) ಹೊರತು ಪಡಿಸಿದರೆ ಯಾವೊಬ್ಬ ಆಟಗಾರನೂ ಉತ್ತಮ ಪ್ರದರ್ಶನ ತೋರದಿರುವುದೇ ಸೋಲಿಗೆ ಪ್ರಮುಖ ಕಾರಣವಾಯಿತು.
ಟಾಪ್ ಆರ್ಡರ್ ಬ್ಯಾಟ್ಸಮನ್‌ಗಳಾದ ಆಯುಷ್ ಬಡೋನಿ, ರಿಷಭ್ ಪಂತ್ ಮತ್ತು ಐಡೆನ್ ಮಾರ್ಕ್ರಾಮ್ ಈ ಮೂವರು ಕೂಡ ಖಾತೆ ತೆರೆಯದೆ ಪೆವಿಲಿಯನ್ ಸೇರಿದ್ದು ತಂಡಕ್ಕೆ ದೊಡ್ಡ ಸಂಕಷ್ಟವನ್ನು ತಂದೊಡ್ಡಿತು.
ನಂತರ ಕ್ರಿಸ್‌ಗೆ ಬಂದ ನಿಕೋಲಸ್ ಪೂರನ್ (22) ಮತ್ತು ಹಿಮ್ಮತ್ ಸಿಂಗ್ (15) ಹೊರತುಪಡಿಸಿದರೆ ಇನ್ನುಳಿದ ಯಾವ ಆಟಗಾರನೂ ಒಂದಂಕಿಯ ಮೊತ್ತವನ್ನು ದಾಟಲಿಲ್ಲ.
ಇದಕ್ಕೂ ಮುನ್ನ ಆತಿಥೇಯ ಲಖನೌ ಸೂಪರ್ ಜೈಂಟ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡು ಲೆಕ್ಕಾಚಾರದಂತೆ ಆರಂಭದಲ್ಲಿಯೇ ರಾಜಸ್ಥಾನ್‌ನ ಪ್ರಮುಖ ಮೂರು ವಿಕೆಟ್ ಉರುಳಿಸಿತು.
ನಾಲ್ಕು ಓವರ್‌ಗಳು ಆಗುವಷ್ಟರಲ್ಲಿಯೇ ಯಶಸ್ವಿ ಜೈಸ್ವಾಲ್ (22), ವೈಭವ್ ಸೂರ್ಯವಂಶಿ (8) ಮತ್ತು ಧ್ರುವ್ ಜುರೆಲ್ (0) ಪ್ರಮುಖರನ್ನು ಕಳೆದುಕೊಂಡು ರಾಜಸ್ಥಾನ್ ಸಂಕಷ್ಟಕ್ಕೆ ಸಿಲುಕಿತು.
ಬಳಿಕ ಬಂದ ರಿಯಾನ್ ಪರಾಗ್ (20), ಶಿಮ್ರಾನ್ ಹೆಟ್ಮಾಯರ್ (22) ಹಾಗೂ ಡೊನೊವನ್ ಫೆರೀರಾ (20) ಕೂಡ ಅಲ್ಪ ಮೊತ್ತದ ರನ್ ಗಳಿಸಿ ಪೆವಿಲಿಯನ್ ಸೇರಿದರು.
ಕೊನೆಯಲ್ಲಿ ರವೀಂದ್ರ ಜಡೇಜಾ ಅಜೇಯ 43 ಮತ್ತು ಶುಭಮ್ ದುಬೆ ಅಜೇಯ 19 ರನ್ ಗಳಿಸಿದರು. ಈ ಜೋಡಿ 49 ರನ್‌ಗಳ ಜತೆಯಾಟ ನಡೆಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿತು.























