ರಾಜಸ್ಥಾನ: ರಾಜ್ಯದ ಬಲೋತ್ರಾ ಜಿಲ್ಲೆಯ ಪಚ್ಪದ್ರಾ ಪ್ರದೇಶದಲ್ಲಿರುವ ಮಹತ್ವಾಕಾಂಕ್ಷಿ ಸಂಸ್ಕರಣಾಗಾರ-ಪೆಟ್ರೋಕೆಮಿಕಲ್ ಸಂಕೀರ್ಣದಲ್ಲಿ ಸೋಮವಾರ (ಏಪ್ರಿಲ್ 20) ಬೆಂಕಿ ಕಾಣಿಸಿಕೊಂಡ ಘಟನೆ ಆತಂಕ ಸೃಷ್ಟಿಸಿದೆ. ಈ ಘಟನೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲು ಒಂದು ದಿನ ಬಾಕಿ ಇರುವಾಗ ಸಂಭವಿಸಿರುವುದು ವಿಶೇಷ ಗಮನ ಸೆಳೆದಿದೆ.
ಅಧಿಕಾರಿಗಳ ಪ್ರಕಾರ, ಬೆಂಕಿ ಕಾಣಿಸಿಕೊಂಡ ತಕ್ಷಣವೇ ತುರ್ತು ಕ್ರಮ ಕೈಗೊಂಡು ಹಲವು ಘಟಕಗಳನ್ನು ಮುನ್ನೆಚ್ಚರಿಕೆಯಾಗಿ ಖಾಲಿ ಮಾಡಲಾಗಿದೆ. ಇದರಿಂದ ಕೆಲಕಾಲ ಕಾರ್ಮಿಕರಲ್ಲಿ ಭೀತಿ ಉಂಟಾದರೂ, ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ದೃಢಪಡಿಸಲಾಗಿದೆ.
ಬೆಂಕಿ ನಿಗ್ರಹಕ್ಕೆ ಭಾರೀ ಕಾರ್ಯಾಚರಣೆ : ಸ್ಥಳಕ್ಕೆ ತಕ್ಷಣವೇ ಒಂದು ಡಜನ್‌ಗೂ ಹೆಚ್ಚು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಕಾರ್ಯಾಚರಣೆ ಮುಂದುವರಿದಿದೆ. ಬೆಂಕಿಯ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ, ಆದರೆ ತಾಂತ್ರಿಕ ದೋಷ ಅಥವಾ ಶಾರ್ಟ್ ಸರ್ಕ್ಯೂಟ್ ಸಾಧ್ಯತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಮಹತ್ವದ ಯೋಜನೆ : ಈ ಸಂಸ್ಕರಣಾಗಾರವು HPCL ಹಾಗೂ ರಾಜಸ್ಥಾನ್ ರಿಫೈನರಿ ಲಿಮಿಟೆಡ್ (HRRL) ವತಿಯಿಂದ ನಿರ್ಮಾಣವಾಗಿದ್ದು, ಸುಮಾರು ₹79,450 ಕೋಟಿ ವೆಚ್ಚದಲ್ಲಿ 4,400 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ವರ್ಷಕ್ಕೆ 9 MMTPA ಸಾಮರ್ಥ್ಯ ಹೊಂದಿರುವ ಈ ಸಂಕೀರ್ಣವು ಭಾರತದ ಇಂಧನ ಭದ್ರತೆ ಹಾಗೂ ಪೆಟ್ರೋಕೆಮಿಕಲ್ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸುವ ಪ್ರಮುಖ ಯೋಜನೆ ಎಂದು ಪರಿಗಣಿಸಲಾಗಿದೆ.
ಭದ್ರತೆ ಬಿಗಿ : ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಈಗಾಗಲೇ ಭದ್ರತೆಯನ್ನು ಕಠಿಣಗೊಳಿಸಲಾಗಿದ್ದು, ಸುಮಾರು 5,000 ಪೊಲೀಸ್ ಸಿಬ್ಬಂದಿ, ಹಿರಿಯ ಅಧಿಕಾರಿಗಳು ಮತ್ತು 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು ನಿಯೋಜಿಸಲಾಗಿದೆ. ಘಟನೆ ನಡೆದರೂ ಕೂಡ, ನಿಗದಿಯಂತೆ ಮಂಗಳವಾರ ಉದ್ಘಾಟನಾ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.





















